ಇಸ್ರೇಲ್
ಇಸ್ರೇಲ್ & ಇರಾನ್ ನಡುವೆ ಬೆಂಕಿ ಹೊತ್ತಿಕೊಂಡಿರುವ ಸಮಯದಲ್ಲೇ ಸ್ಫೋಟಕ ಹೇಳಿಕೆ ನೀಡಿದ್ದಾರೆ ಇಸ್ರೇಲ್ ಸೇನೆಯ ಮುಖ್ಯಸ್ಥರು. ಅದರಲ್ಲೂ ಇರಾನ್ ವಿಚಾರದಲ್ಲಿ ಯುದ್ಧದ ಸಹವಾಸ ಬೇಡ ಎಂದು ಇಸ್ರೇಲ್ ಮೇಲೆ ಈಗ ಇಡೀ ಜಗತ್ತು ಒತ್ತಡ ಹೇರುತ್ತಿದೆ. ಹೀಗಿದ್ದಾಗ ಇಸ್ರೇಲ್ ಸೇನೆಯ ಮುಖ್ಯಸ್ಥರು ನೀಡಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ.
ಕಳೆದ ವಾರ ದಿಢೀರ್ ಇಸ್ರೇಲ್ ಮೇಲೆ ಇರಾನ್ ಸೇನೆ ದಾಳಿ ಮಾಡಿತ್ತು. ಇಸ್ರೇಲ್ ತಮ್ಮ ರಾಯಭಾರ ಕಚೇರಿ ಮೇಲೆ ದಾಳಿ ಮಾಡಿದೆ ಎಂಬ ಆರೋಪ ಮಾಡಿದ್ದ ಇರಾನ್‌ಗೆ ತಕ್ಷಣ ಸೇಡು ತೀರಿಸಿಕೊಳ್ಳುವ ಹಂಬಲ ಇತ್ತು. ಹೀಗಾಗಿಯೇ ಇಸ್ರೇಲ್ ವಿರುದ್ಧ ಯುದ್ಧಕ್ಕು ತಾನು ಸಿದ್ಧ ಎಂದಿತ್ತು ಇರಾನ್. ಇಂತಹ ಪರಿಸ್ಥಿತಿಯಲ್ಲಿ ರೊಚ್ಚಿಗೆದ್ದ ಇರಾನ್, ದಿಢೀರ್ ಅಂತಾ ದಾಳಿ ಮಾಡಿತ್ತು. ಹೀಗೆ ನಡೆದ ದಾಳಿಯಲ್ಲಿ ಇಸ್ರೇಲ್ ಬಚಾವ್ ಆಗಿದ್ದರೂ, ಈಗ ತಾನು ಸಮಯ ಬಂದಾಗ ಸೇಡು ತೀರಿಸಿಕೊಳ್ಳುವೆ ಎಂದು ಪ್ರಮಾಣ ಮಾಡಿದೆ!
ಅಂದಹಾಗೆ ಈ ಬಗ್ಗೆ ಮಾತನಾಡಿರುವ ಇಸ್ರೇಲ್ ಸೇನಾ ಪಡೆ ಮುಖ್ಯಸ್ಥರು, ಇರಾನ್ ಸೇನೆ ನಡೆಸಿದ ದಾಳಿಗೆ ಸರಿಯಾದ ಸಮಯದಲ್ಲಿ ಪ್ರತ್ಯುತ್ತರ ನೀಡುತ್ತೇವೆ ಎಂದಿದ್ದಾರೆ. ಈ ಮೂಲಕ ಇಸ್ರೇಲ್ & ಇರಾನ್ ನಡುವೆ ಯುದ್ಧ ಇನ್ನೂ ಸಂಪೂರ್ಣ ತಣ್ಣಗೆ ಆಗಿಲ್ಲ ಎಂಬುದು ಸ್ಪಷ್ಟ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಮಧ್ಯಪ್ರಾಚ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ಜಾಗತಿಕ ಆರ್ಥಿಕ ವ್ಯವಸ್ಥೆ ಕೂಡ ನಲುಗಿ ಹೋಗುತ್ತಿದೆ. ಇಂತಹ ಸಮಯದಲ್ಲೇ, ಇಸ್ರೇಲ್ ಕಡೆಯಿಂದ ಬಂದಿರುವ ಪ್ರತಿಕ್ರಿಯೆ ಸಂಚಲನ ಸೃಷ್ಟಿ ಮಾಡಿದೆ.
ಡಮಾಸ್ಕಸ್‌ನ ಇರಾನ್ ರಾಯಭಾರ ಕಚೇರಿಯ ಮೇಲೆ ಏಪ್ರಿಲ್ 1ಕ್ಕೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್ ಅಟ್ಟಹಾಸ ಮೆರೆದಿದೆ ಎಂದು ಇರಾನ್ ಆರೋಪಿಸಿತ್ತು. ಡಮಾಸ್ಕಸ್ ಮೇಲೆ ಇಸ್ರೇಲ್‌ನ ದಾಳಿಯ ವೇಳೆ ಸೇನಾಧಿಕಾರಿಗಳು ಸೇರಿ ಹಲವು ಇರಾನ್ ಅಧಿಕಾರಿಗಳು ಜೀವ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಡಮಾಸ್ಕಸ್ ದಾಳಿಗೆ ನೇರವಾಗಿ ಪ್ರತಿಕ್ರಿಯೆ ನೀಡಲು ಇರಾನ್ ಸಿದ್ಧತೆ ಆರಂಭಿಸಿದೆ ಎಂಬ ಮಾಹಿತಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ದಾಳಿ ಆರಂಭವಾಗಿತ್ತು. ಹೀಗೆ, ಕೋಳಿ ಜಗಳದ ರೀತಿ ಆರಂಭ ಆಗಿರುವ ಇಸ್ರೇಲ್ & ಇರಾನ್ ಯುದ್ಧ ಭಯಾನಕ ಸ್ವರೂಪ ಪಡೆಯುವ ಭಯ ಆವರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ