ನವದೆಹಲಿ:
ಬಿಜೆಪಿ ಹಾಗೂ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಗಳ ಹಿಂದುತ್ವಕ್ಕೆ ವ್ಯತ್ಯಾಸಗಳಿವೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ತಮ್ಮ ಪಕ್ಷದ ಹಿಂದುತ್ವ ಮನೆಗಳಲ್ಲಿ ಒಲೆ ಹೊತ್ತಿಸಿದರೆ, ಬಿಜೆಪಿಯ ಹಿಂದುತ್ವ ಮನೆಗಳನ್ನೇ ಹೊತ್ತಿ ಉರಿಯುವಂತೆ ಮಾಡುತ್ತದೆ ಎಂದು ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿರುವ ಉದ್ಧವ್ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿ ನ್ಯಾಯಾಂಗದ ಮೇಲೆ ಒತ್ತಡ ಹಾಕುತ್ತಿದ್ದು, ಮತ್ತೊಂದೆಡೆ ಎಲ್ಲರಿಗೂ ಕಾನೂನು ಸಮಾನತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದಾರೆ.
“ಮೋದಿ ಸರ್ಕಾರ ತಮ್ಮ ಪಕ್ಷದ ವಿರುದ್ಧ ಭಾರತದ ಚುನಾವಣಾ ಆಯೋಗವನ್ನು ಬಳಸಿತ್ತು. “ನಮ್ಮ ಬಿಲ್ಲು ಮತ್ತು ಬಾಣವನ್ನು (ಪಕ್ಷದ ಚಿಹ್ನೆಯನ್ನು) ಕಸಿದುಕೊಳ್ಳಲಾಯಿತು. ನೀವು (ಪಿಎಂ ಮೋದಿ) ನನ್ನ ಪಕ್ಷ, ನನ್ನ ಚಿಹ್ನೆ ಮತ್ತು ನನ್ನ ಜನರನ್ನು ಕಿತ್ತುಕೊಂಡಿದ್ದೀರಿ, ಆದರೆ ನೀವು ಇನ್ನೂ ಉದ್ಧವ್ ಠಾಕ್ರೆಗೆ ಭಯಪಡುತ್ತೀರಿ? ”ಎಂದು ಠಾಕ್ರೆ ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.
ಇದೇ ವೇಳೆ ಶಿವಸೇನೆ (ಯುಬಿಟಿ) ಮುಖ್ಯಸ್ಥರು ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿದೆ ಎಂದು ಹೇಳುವ ಸರ್ಕಾರದ ವರದಿಯ ಬಗ್ಗೆ ಮಾತನಾಡಿದ್ದಾರೆ. ಕಳೆದ ಒಂದು ದಶಕದಿಂದ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿದ್ದಾರೆ, ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಳವಾಗಿರುವುದು ಪ್ರಧಾನಿಯ ಸಾಧನೆಯೋ ವೈಫಲ್ಯವೋ ಅವರೇ ಸ್ಪಷ್ಟಪಡಿಸಬೇಕು, ಮುಸ್ಲಿಮರ ಜನಸಂಖ್ಯೆ ಏರಿಕೆಯಾಗಿರುವುದಕ್ಕೆ ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕೋ ಅಥವಾ ಟೀಕಿಸಬೇಕೋ ಎಂಬ ಗೊಂದಲದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ