ನವದೆಹಲಿ:
ಭಾರತ-ಗಲ್ಫ್ ಸಹಕಾರ ಮಂಡಳಿ (GCC) ವಿದೇಶಾಂಗ ಸಚಿವರ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಗಾಜಾದಲ್ಲಿನ ಪ್ರಸ್ತುತ ಪರಿಸ್ಥಿತಿಯು ತೀವ್ರ ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.
ಗಾಜಾದಲ್ಲಿನ ಪ್ರಸ್ತುತ ಪರಿಸ್ಥಿತಿಯು ಈಗ ನಮ್ಮ ಪ್ರಮುಖ ಕಾಳಜಿ ವಿಷಯವಾಗಿದೆ. ಈ ವಿಷಯದಲ್ಲಿ ಭಾರತದ ನಿಲುವು ತಾತ್ವಿಕ ಮತ್ತು ಸ್ಥಿರವಾಗಿದೆ. ನಾವು ಭಯೋತ್ಪಾದನೆ ಮತ್ತು ಒತ್ತೆಯಾಳುಗಳನ್ನಾಗಿ ತೆಗೆದುಕೊಳ್ಳುವ ಕೃತ್ಯವನ್ನು ಖಂಡಿಸುತ್ತೇವೆ. ಅಮಾಯಕ ನಾಗರಿಕರ ನಿರಂತರ ಸಾವು ತೀವ್ರ ನೋವನ್ನುಂಟುಮಾಡುತ್ತಿದೆ. ಯಾವುದೇ ಮಾನವೀಯ ಕಾನೂನಿನ ತತ್ವಗಳನ್ನು ಗಣನೆಗೆ ತೆಗೆದುಕೊಂಡು ನಾವು ಸಾಧ್ಯವಾದಷ್ಟು ಬೇಗ ಕದನ ವಿರಾಮ ಹಾಕಬೇಕು ಎಂದು ಹೇಳಿದರು.
ಪ್ಯಾಲೆಸ್ತೀನ್ ಸಮಸ್ಯೆಗೆ ಎರಡು-ರಾಷ್ಟ್ರಗಳ ಪರಿಹಾರಕ್ಕೆ ಭಾರತವು ತನ್ನ ಬೆಂಬಲ ನೀಡುತ್ತದೆ ಎಂದು ಪುನರುಚ್ಛರಿಸಿದರು. ನಾವು ಎರಡು ರಾಷ್ಟ್ರಗಳ ಪರಿಹಾರದ ಮೂಲಕ ಪ್ಯಾಲೆಸ್ತೀನ್ ಸಮಸ್ಯೆಗೆ ಪರಿಹಾರಕ್ಕಾಗಿ ಸತತವಾಗಿ ನಿಂತಿದ್ದೇವೆ. ಪ್ಯಾಲೆಸ್ತೀನ್ ಸಂಸ್ಥೆಗಳು ಮತ್ತು ಸಾಮರ್ಥ್ಯಗಳ ನಿರ್ಮಾಣಕ್ಕೆ ನಾವು ಕೊಡುಗೆ ನೀಡಿದ್ದೇವೆ. ಮಾನವೀಯ ಪರಿಸ್ಥಿತಿಗೆ ಸಂಬಂಧಿಸಿದಂತೆ, ನಾವು ಪರಿಹಾರವನ್ನು ಒದಗಿಸಿದ್ದು, ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಗೆ ನಮ್ಮ ಬೆಂಬಲವನ್ನು ಹೆಚ್ಚಿಸಿದ್ದೇವೆ ಎಂದರು.
ಕತಾರ್‌ನ ಪ್ರಧಾನ ಮಂತ್ರಿ ಮತ್ತು ಹಣಕಾಸು ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಸ್ಸಿಮ್ ಅಲ್ ಥಾನಿ ಅವರೊಂದಿಗೆ ಕಾರ್ಯತಂತ್ರದ ಮಾತುಕತೆಗಾಗಿ ಭಾರತ-ಜಿಸಿಸಿ ಜಂಟಿ ಸಚಿವರ ಸಭೆಯ ಸಹ-ಅಧ್ಯಕ್ಷತೆಯನ್ನು ಜೈಶಂಕರ್ ವಹಿಸಿದ್ದರು.ಆರೋಗ್ಯ, ವ್ಯಾಪಾರ, ಭದ್ರತೆ, ಕೃಷಿ ಮತ್ತು ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಂಟಿ ಚಟುವಟಿಕೆಗಳನ್ನು ಕೈಗೊಳ್ಳಲು ಜಂಟಿ ಕ್ರಿಯಾ ಯೋಜನೆ 2024-28 ನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.
ಭಾರತ-ಜಿಸಿಸಿ ಸಭೆಯ ಹಿನ್ನೆಲೆಯಲ್ಲಿ ಜೈಶಂಕರ್ ಅವರು ಕತಾರ್, ಸೌದಿ ಅರೇಬಿಯಾ, ಓಮನ್, ಕುವೈತ್ ಮತ್ತು ಬಹ್ರೇನ್ ವಿದೇಶಾಂಗ ಸಚಿವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.ಜಿಸಿಸಿ ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಓಮನ್, ಕತಾರ್ ಮತ್ತು ಕುವೈತ್ ಒಳಗೊಂಡಿರುವ ಪ್ರಭಾವಿ ಗುಂಪು. 2022-23ರ ಅವಧಿಯಲ್ಲಿ ಭಾರತ ಮತ್ತು ಜಿಸಿಸಿ ದೇಶಗಳ ನಡುವಿನ ಒಟ್ಟು ವ್ಯಾಪಾರದ ಪ್ರಮಾಣವು 184.46 ಬಿಲಿಯನ್ ಡಾಲರ್ ಆಗಿತ್ತು.
ಜಿಸಿಸಿ ಜಾಗತಿಕ ಇಂಧನ ಪೂರೈಕೆಯ ಮೂಲಾಧಾರವಾಗಿದೆ. ಭಾರತವು ವಿಶ್ವದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಭವಿಷ್ಯದ ಬೇಡಿಕೆಯ ಬಹುಪಾಲು ನಮ್ಮಿಂದ ಬರಲಿದೆ. ನಮ್ಮ ಆಳವಾದ ಸಹಯೋಗವು ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು, ನಾವೀನ್ಯತೆಯನ್ನು ಮತ್ತು ಇಂಧನವನ್ನು ಹೆಚ್ಚಿಸಲು, ಭದ್ರತೆ ಒದಗಿಸಲು ಸಹಾಯ ಮಾಡುತ್ತದೆ ಎಂದರು. ಸುಮಾರು ಒಂಬತ್ತು ಮಿಲಿಯನ್ ಭಾರತೀಯರು ಜಿಸಿಸಿಯಲ್ಲಿ ವಾಸಿಸುತ್ತಿದ್ದಾರೆ.
ಗಲ್ಫ್ ಪ್ರದೇಶವು ಸಮಕಾಲೀನ ಭೌಗೋಳಿಕ ರಾಜಕೀಯದಲ್ಲಿ ಕೇಂದ್ರ ಸ್ಥಾನವನ್ನು ಪಡೆದುಕೊಂಡಿದೆ. ಸಂಘರ್ಷ ಮತ್ತು ಉದ್ವಿಗ್ನತೆ ಪರಿಸ್ಥಿತಿಯಲ್ಲಿ ಭಾರತವು ಜಾಗತಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ಬದ್ಧತೆಯನ್ನು ಹಂಚಿಕೊಳ್ಳುತ್ತದೆ ಎಂದು ಅವರು ಹೇಳಿದರು.ರಿಯಾದ್‌ನಲ್ಲಿ ಜಿಸಿಸಿ ಸಭೆಯ ನೇಪಥ್ಯದಲ್ಲಿ ಜೈಶಂಕರ್ ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ಭೇಟಿಯಾದರು.