ನವದೆಹಲಿ:
ಬೇಸಿಗೆ ಧಗೆ ಮತ್ತು ಹೀಟ್ ವೇವ್ ಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ದಿನೇ ದಿನೇ ಏರಿಕೆಯಾಗುತ್ತಿರುವ ತಾಪಮಾನ ಜನರನ್ನು ಹೈರಾಣಾಗಿಸಿದೆ.
ಕಳೆದೊಂದು ವಾರದಿಂದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಉಷ್ಣ ಹವೆ ವ್ಯಾಪಕ ತಾಪಮಾನ ಏರಿಕೆಗೆ ಕಾರಣವಾಗಿದ್ದು, ದೆಹಲಿ, ರಾಜಸ್ತಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ತಾಪಮಾನ ಈಗಾಗಲೇ 45 ಡಿಗ್ರಿ ದಾಟಿದೆ. ಅಂತೆಯೇ ರಾಜಸ್ತಾನದಲ್ಲಿ ಉಷ್ಣಹವೆಗೆ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ರಾಜಸ್ತಾನದ ಜಲೋರ್ ಜಿಲ್ಲಾ ಆಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ ನಿಂದ ಅನಾರೋಗ್ಯಕ್ಕೆ ತುತ್ತಾಗಿ ದಾಖಲಾಗಿದ್ದ ರೋಗಿಗಳ ಪೈಕಿ ಓರ್ವ ಮಹಿಳೆ ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.
ಈ ಪೈಕಿ ಮೂವರು ಜಲೋರ್ ಜಿಲ್ಲೆಯವರಾಗಿದ್ದರೆ, ನಾಲ್ಕನೆಯವರು ಗುಜರಾತ್‌ನ ಪಕ್ಕದ ದಿಫಾ ಗ್ರಾಮದವರಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಆರ್ ಎಸ್ ಭಾರ್ತಿ ತಿಳಿಸಿದ್ದಾರೆ.
ಕಳೆದ ಹತ್ತು ದಿನಗಳಿಂದ, ರಾಜಸ್ಥಾನ ಬಿರುಸಿನ ಶಾಖದ ವಾತಾವರಣದಿಂದ ತತ್ತರಿಸುತ್ತಿದೆ. ನಗರಗಳು ಮತ್ತು ಹೆದ್ದಾರಿಗಳಲ್ಲಿ ಸಾಮಾನ್ಯ ಜೀವನ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ರಾಜಸ್ತಾನದ ಫಲೋಡಿಯಲ್ಲಿ ಗರಿಷ್ಠ 48.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಜೈಸಲ್ಮೇರ್ ನಲ್ಲಿ 47.5, ಜಲೋರ್ 47.3, ಜೋಧ್‌ಪುರ 47.4, ಭಿಲ್ವಾರ 46 ಮತ್ತು ಜೈಪುರದಲ್ಲಿ 44 ಡಿಗ್ರಿ ಸೆಲ್ಸಿಯಸ್ ಮತ್ತು ಬಾರ್ಮರ್ ನಲ್ಲಿ 48.8 ಡಿಗ್ರಿ ತಾಪಮಾನ ದಾಖಲಾಗಿದೆ.
ಮಹಾರಾಷ್ಟ್ರದ ಔರಾಂಗಾಬಾದ್ ನಲ್ಲಿ ಗರಿಷ್ಠ 43.5 ಡಿಗ್ರಿ ತಾಪಮಾನ ದಾಖಲಾಗಿದ್ದು, ಮಾಲೇಗಾಂವ್, ಬ್ರಹ್ಮಪುರಿ, ಬೀಡ್, ಅಮರಾವತಿ ಮತ್ತು ಯವತ್ಮಾಲ್ ನಲ್ಲಿ ತಾಪಮಾನ 42 ಡಿಗ್ರಿ ಗಡಿ ದಾಟಿದೆ. ಮಧ್ಯ ಪ್ರದೇಶದಲ್ಲೂ ದಮೋಹ್, ಧರ್, ಖಾರ್ಗಾಂವ್, ಖಂಡ್ವಾ, ಉಜ್ಜೈನ್, ಶಿವಪುರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ 45 ಡಿಗ್ರಿ ದಾಟಿದೆ.