ಬೆಂಗಳೂರು:
ಸಹಾಯಕ ಲೋಕೋ ಪೈಲಟ್ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ನೈಋತ್ಯ ರೈಲ್ವೆ ಬುಧವಾರ ಅಧಿಸೂಚನೆ ಹೊರಡಿಸಿದೆ.
ಈ ಬಗ್ಗೆ ಕೆಲ ದಿನಗಳ ಹಿಂದಷ್ಚೇ ಸಂಸದ ತೇಜಸ್ವಿ ಸೂರ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು, ಇದರ ಬೆನ್ನಲ್ಲೇ ರೈಲ್ವೆ ಸಹಾಯಕ ಸಚಿವ ವಿ ಸೋಮಣ್ಣ ಅವರೇ ಎಕ್ಸ್ ಪೋಸ್ಟ್ ಮಾಡಿ ಈ ಬಗ್ಗೆ ಅಧಿಚೂಚನೆ ಹೊರಡಿಸಿರುವುದನ್ನು ದೃಢಪಡಿಸಿದ್ದಾರೆ. ನನ್ನ ಸೂಚನೆಯ ಮೇರೆಗೆ ಸಹಾಯಕ ಲೋಕೋ ಪೈಲಟ್ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ನೈಋತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ. ಈ ನಿರ್ಧಾರದಿಂದ ಪ್ರತಿಭಾವಂತ ಕನ್ನಡಿಗ ಉದ್ಯೋಗಿಗಳಿಗೆ ರೈಲ್ವೆಯಲ್ಲಿ ಮತ್ತಷ್ಟು ಹೆಚ್ಚಿನ ಅವಕಾಶಗಳು ದೊರಕಲಿವೆ ಎಂಬ ಭರವಸೆಯಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರೈಲ್ವೆ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಲು ಅವಕಾಶ ನೀಡಬೇಕೆಂದು ನಾನು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಲ್ಲಿ ಮನವಿ ಮಾಡಿದ್ದೆ. ಲಕ್ಷಾಂತರ ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವುದರಿಂದ ಸ್ಪರ್ಧಾತ್ಮಕ ಲಾಭ ಸಿಗುತ್ತದೆ ಮತ್ತು ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ. ನಮ್ಮ ಮನವಿಗೆ ಓಗೊಟ್ಟು ಮಾನ್ಯ ಸಚಿವರಾದ ಶ್ರೀ ಸೋಮಣ್ಣ ಅವರು ಸಹಾಯಕ ಲೋಕೋ ಪೈಲಟ್ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ನೈಋತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ. ಕನ್ನಡಿಗರ ಮನವಿಯನ್ನು ಪುರಸ್ಕರಿಸಿ ದಿಟ್ಟ ಹೆಜ್ಜೆ ಇಟ್ಟ ಮಾನ್ಯ ಸಚಿವರಿಗೆ ಸಮಸ್ತ ಕನ್ನಡ ಪರೀಕ್ಷಾರ್ಥಿಗಳ ಪರವಾಗಿ ಧನ್ಯವಾದಗಳು. ಹಾಗೆಯೇ, ಇನ್ನು ಮುಂದೆ ರೈಲ್ವೆ ಇಲಾಖೆ ನಡೆಸುವ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವಂತೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡುತ್ತೇನೆಂದು ಹೇಳಿದ್ದಾರೆ.