ನವದೆಹಲಿ:
ಉತ್ತರ ಭಾರತದಲ್ಲಿ ಬಿಸಿಗಾಳಿಯ ಆರ್ಭಟ ಹೆಚ್ಚಾಗಿದ್ದು, ಬಿಸಿಲಿನ ತಾಪದಿಂದ ಕಳೆದ 36 ಗಂಟೆಗಳಲ್ಲಿ ಒಟ್ಟು 45 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಬಿಸಿಗಾಳಿಯಿಂದ ಮೃತಪಟ್ಟವರ ಸಂಖ್ಯೆ 87 ಕ್ಕೆ ಏರಿಕೆಯಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಪಶ್ಚಿಮ ಒಡಿಶಾದಲ್ಲಿ 19 ಜನರು ಶಾಖದ ಹೊಡೆತದಿಂದ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ 16 ಜನ, ಬಿಹಾರದಲ್ಲಿ ಐದು ಜನ, ರಾಜಸ್ಥಾನದಲ್ಲಿ ನಾಲ್ವರು ಮತ್ತು ಪಂಜಾಬ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಹರ್ಯಾಣ, ಚಂಡೀಗಢ-ದೆಹಲಿ, ಮತ್ತು ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಬಿಸಿಲಿನ ತಾಪದಿಂದ ಜನ ತತ್ತರಿಸಿ ಹೋಗಿದ್ದಾರೆ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನದ ಕೆಲವು ಭಾಗಗಳಲ್ಲಿ ಮತ್ತು ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ ತಾಪಮಾನ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ತಿಳಿಸಿದೆ. ನಿನ್ನೆ (ಶುಕ್ರವಾರ) ಕಾನ್ಪುರದಲ್ಲಿ(ಪಶ್ಚಿಮ ಉತ್ತರ ಪ್ರದೇಶ) 48.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ವರದಿಯಾಗಿದೆ.
ಏತನ್ಮಧ್ಯೆ, ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಮೇ 29 ರಂದು ದೆಹಲಿಯ ಮುಂಗೇಶ್‌ಪುರ ಹವಾಮಾನ ಕೇಂದ್ರದಲ್ಲಿ ಸೆನ್ಸಾರ್ ತಪ್ಪಾಗಿ 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ತೋರಿಸಿದೆ. ಇದು “ಸಂವೇದಕದ ಅಸಮರ್ಪಕ ಕಾರ್ಯನಿರ್ವಹಣೆ”ಯ ಪರಿಣಾಮ ಎಂದು IMD ಹೇಳಿದೆ.
ಮುಂಗೇಶ್‌ಪುರದ ಸ್ವಯಂಚಾಲಿತ ಹವಾಮಾನ ಕೇಂದ್ರ(AWS)ದ ಸಂವೇದಕ “ಸ್ಟ್ಯಾಂಡರ್ಡ್ ಉಪಕರಣವು ವರದಿ ಮಾಡಿದ ಗರಿಷ್ಠ ತಾಪಮಾನಕ್ಕಿಂತ ಸುಮಾರು 3 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ತಾಪಮಾನವನ್ನು ತೋರಿಸುತ್ತಿದೆ” ಎಂದು IMD ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ