ಸಿಎಂ ಸಿದ್ದರಾಮಯ್ಯಗೆ ಕೃತಜ್ಞತಾ ಪತ್ರ ಬರೆದ ಎಸ್ಸೆಸ್ಸೆಲ್ಸಿ ಟಾಪರ್ ಅಂಕಿತಾ

ಬೆಂಗಳೂರು:

    ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತಾ ಪತ್ರ ಬರೆದಿದ್ದಾರೆ.

    ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಂಕಿತಾರನ್ನು ಬೆಂಗಳೂರಿಗೆ ಕರೆಸಿಕೊಂಡು ಸನ್ಮಾನಿಸಿ, ಆಕೆಯ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹಧನ ನೀಡಿದ್ದರು. ತನಗೆ ದೊರೆತ ಸತ್ಕಾರ, ಮುಂದಿನ ವಿದ್ಯಾಭ್ಯಾಸಕ್ಕೆ ಸಿಕ್ಕ ನೆರವಿಗೆ ಅಂಕಿತಾರವರು ಸಿಎಂಗೆ ಧನ್ಯವಾದ ತಿಳಿಸಿದ್ದಾರೆ. 

    ಮಾನ್ಯ ಮುಖ್ಯಮಂತ್ರಿಗಳಿಗೆ ನಾನು ಮಾಡುವ ಸಾಷ್ಟಾಂಗ ಸಮಸ್ಕಾರಗಳು. ಈ ಬಾರಿ ಅಂದರೆ, 2023-24ನೇ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ ಪ್ರಥಮ (100%) ಸ್ಥಾನ ಬಂದಿದ್ದು, ಇಡೀ ರಾಜ್ಯಕ್ಕೆ ಸಂತಸಕರವಾದ ಸಂಗತಿಯಾಗಿದೆ. ಅದರಲ್ಲೂ ಪ್ರತೀ ಬಾರಿ ಫಲಿತಾಂಶ ಎಂದೊಡನೆ ದಕ್ಷಿಣ ಕರ್ನಾಟಕದೆಡೆ ಮುಖ ಮಾಡುತ್ತಿದ್ದ ಜನರ ದೃಶ್ಯ ಈ ಬಾರಿ ಬದಲಾಯಿತು. ಉತ್ತರ ಕರ್ನಾಟಕದ ಒಬ್ಬ ಸಾಮಾನ್ಯ ಹುಡುಗಿಯೂ ಸಹ ತಾನಂದುಕೊಂಡಿದ್ದನ್ನು ಸಾಧಿಸಲಬಲ್ಲಳು ಎಂದು ತೋರಿಸಿಕೊಟ್ಟಿದ್ದಕ್ಕೆ ತುಂಬಾ ಹೆಮ್ಮೆ ಇದೆ.

   ನನ್ನನ್ನು ಬೆಂಗಳೂರಿಗೆ ಅಹ್ವಾನಿಸಿ, ತಮ್ಮ ಸ್ವ-ಗೃಹದವರೆಗೂ ಕರೆದು ಸನ್ಮಾನಿಸಿ, ಅಭಿನಂದಿಸಿ ನನ್ನ ಮುಂದಿನ ದಿನ ಭವಿತ್ಯಕ್ಕೆ ನೆರವು ನೀಡಿದ್ದೀರಿ. ಅಷ್ಟೇ ಅಲ್ಲದೇ ತುಂಬು ಹೃದಯದಿಂದ ನನ್ನನ್ನು ಸತ್ಕರಿಸಿ, ಹರಸಿ, ಆಶೀರ್ವದಿಸಿದ್ದೀರಿ. ನಿಮ್ಮಿಂದಲೇ ಪ್ರಾರಂಭವಾದ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು. ಈ ಸಂಸ್ಥೆ ಅಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮೆಳ್ಳಗೇರಿಯಲ್ಲಿ ನಾನು ಓದಿದ್ದು. ಈ ಎಲ್ಲ ವಸತಿ ಶಾಲೆಗಳ ಪ್ರಾರಂಭಿಕ ಕಾರಣ ಭೂತರು ತಾವೆಂದು ತಿಳಿದು ಬಹಳ ಸಂತಸವಾಗಿದೆ. ಸಾಕಷ್ಟು ಸುವ್ಯವಸ್ಥೆಯುಳ್ಳ ಈ ಶಾಲೆಗಳು ಸರ್ಕಾರಿ ಶಾಲೆಗಳು ಎಂದು ಸಾಕಷ್ಟು ಜನರಿಗೆ ಇವುಗಳ ಬಗ್ಗೆ ತಪ್ಪು ಕಲ್ಪನೆ ಇರುರುತ್ತದೆ. ಈ ಶಾಲೆ ಸಾಕಷ್ಟು ಬಡ ಪ್ರತಿಭಗಳಿಗೆ ಶಿಕ್ಷಣ ದೊರಕಿ, ಬಾಳಿಗೆ ದಾರಿದೀಪವಾಗಿವೆ. 

    ನಿಮ್ಮನ್ನು ಭೇಟಿಯಾಗುವುದು ಎಂದರೇ ಜನಸಾಮಾನ್ಯರಿಗೆ ಎಟುಕದ ಮಾತು. ಅಂತಹ ಸಂದರ್ಭದಲ್ಲಿ ನನಗೆ ಈ ಅವಕಾಶ ಬಂದಿರುವುದಕ್ಕೆ ಬಹಳ ಸಂತೋಷವಿದೆ. ನಿಮ್ಮ ಆಶೀರ್ವಾದ ಸದಾ ನಮ್ಮಂದಿಗೆ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಅಂಕಿತಾ ಬಸಪ್ಪ ಕೊಣ್ಣೂರು ಪತ್ರದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಪತ್ರದ ಪ್ರತಿಯನ್ನು ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ ಹೆಸರಿನ ಸರ್ಕಾರದ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ಶೇರ್ ಮಾಡಲಾಗಿದೆ.

Recent Articles

spot_img

Related Stories

Share via
Copy link
Powered by Social Snap