ಬೆಂಗಳೂರು:
ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ದರ ಕಳೆದ 14 ವರ್ಷದಿಂದ ಏರಿಕೆಯಾಗಿಲ್ಲ. ನಗರದ ಪರಿಸ್ಥಿತಿಯಲ್ಲಿ ನೀರಿನ ದರ ಹೆಚ್ಚಳ ಅನಿವಾರ್ಯವಾಗಿದೆ. ಈ ಪ್ರಸ್ತಾಪವನ್ನು ಸಾರ್ವಜನಿಕರ ಮುಂದಿಟ್ಟು ಅವರ ಅಭಿಪ್ರಾಯ ಪಡೆಯುತ್ತೇವೆ ಎಂದು ಬೆಂಗಳೂರು ನಗರ ಉಸ್ತುವಾರಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಮೂಲಕ ಬೆಂಗಳೂರು ನಗರದಲ್ಲಿ ನೀರಿನ ದರ ಹೆಚ್ಚಳ ನಿಶ್ಚಿತ ಎಂಬ ಸುಳಿವನ್ನು ಸಚಿವರು ನೀಡಿದ್ದಾರೆ. ಬೆಂಗಳೂರು ಜಲಮಂಡಳಿ (BWSSB) ದರ ಪರಿಷ್ಕರಣೆ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿ ಕೆ ಶಿವಕುಮಾರ್, ಬೆಂಗಳೂರು ಜಲ ಮಂಡಳಿಗೆ ಹಣ ಇಲ್ಲದೆ ವಿದ್ಯುತ್ ಬಿಲ್ ಕಟ್ಟಲು ಆಗುತ್ತಿಲ್ಲ, ಸಿಬ್ಬಂದಿಗೆ ಸಂಬಳ ಕೊಡುವುದಕ್ಕೂ ಕಷ್ಟವಾಗಿದೆ. ಪ್ರತಿ ವರ್ಷ ನಷ್ಟ ಆಗುತ್ತಲೇ ಇದೆ. ಅಪಾರ ಜನಸಂಖ್ಯೆ, ಕಾರ್ಖಾನೆಗಳು, ಕಚೇರಿಗಳು ಸಾಕಷ್ಟು ಇರುವ ಬೆಂಗಳೂರಿಗೆ ಕುಡಿಯುವ ನೀರು ಬೇಕು. ನೀರಿನ ದರ ಹೆಚ್ಚು ಮಾಡಬೇಕೆ ಬೇಡವೇ ಎಂದು ಸಾರ್ವಜನಿಕರೇ ಹೇಳಲಿ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ವಿದ್ಯುತ್ ಬೆಲೆ ಹೆಚ್ಚಿಸಿದ್ದರು. ನಮ್ಮ ಸರ್ಕಾರ ಬಂದ ಮೇಲೆ ಕಡಿಮೆ ಮಾಡಿದೆವು. ಕಡಿಮೆ ಮಾಡಿದರೆ ಮಾತೇ ಆಡುವುದಿಲ್ಲ. ದರ ಹೆಚ್ಚಿಸಿದರೆ ಮಾತನಾಡುತ್ತೀರಿ. 400 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 1 ಸಾವಿರ ಆಯಿತು. 75 ರೂಪಾಯಿ ಇದ್ದ ಪೆಟ್ರೋಲ್ ಬೆಲೆ 100 ರೂಪಾಯಿ ಆಯಿತು. 3 ರೂಪಾಯಿ ಜಾಸ್ತಿನಾ ಅಥವಾ 30 ರೂಪಾಯಿಯಾ ಎಂದು ಸುದ್ದಿಗೋಷ್ಠಿಯಲ್ಲಿ ಡಿ ಕೆ ಶಿವಕುಮಾರ್ ಪತ್ರಕರ್ತರನ್ನು ಪ್ರಶ್ನಿಸಿದರು.