ನವದೆಹಲಿ:
ಬಾಕಿ ಉಳಿದಿರುವ ಬರ ಪರಿಹಾರ ಮೊತ್ತ ಸೇರಿದಂತೆ ರಾಜ್ಯಕ್ಕೆ ಬರಬೇಕಿರುವ ಯೋಜನೆಗಳ ಬಗ್ಗೆ ಪಕ್ಷಭೇದ ಮರೆತು ಕರ್ನಾಟಕದ ಒಳಿತಿಗಾಗಿ ಸಂಸದರೆಲ್ಲರೂ ಕೇಂದ್ರ ಸರ್ಕಾರದ ಒತ್ತಡ ಹೇರಬೇಕೆಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಒತ್ತಾಯಿಸಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾಮೇಲ್ದಂಡೆ ಯೋಜನೆಗೆ 2023-24ನೇ ಸಾಲಿನ ಬಜೆಟ್ ನಲ್ಲಿ 5,300 ಕೋಟಿ ನೀಡುತ್ತೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದರೂ ಇನ್ನೂ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರದಿಂದ ಅಸಮರ್ಪಕ ತಾಂತ್ರಿಕ ಸಮಸ್ಯೆಯಿಂದ ಎಂದು ಹೇಳಿ ಇದುವರೆಗೆ ಹಣ ನೀಡಿಲ್ಲ. ಆದರೆ ಆ ತರಹದ ವಿಷಯವೇ ಇಲ್ಲ, ನಮಗೆ ಕೇಂದ್ರ ಸರ್ಕಾರ ತಿಳಿಸಿಯೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ 5,300 ಕೋಟಿಯನ್ನು ರಾಜ್ಯಕ್ಕೆ ನೀಡಲು ಬಾಕಿಯಿದೆ ಎಂದು ಒಪ್ಪಿಕೊಂಡಿದ್ದಾರೆ. ಇದನ್ನು ರಾಷ್ಟ್ರದ ಯೋಜನೆಯನ್ನಾಗಿ ಘೋಷಿಸಬೇಕೆಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಹೇಳಿದ್ದರು. ಕೇಂದ್ರದಿಂದ ಹಣ ಬರುವ ಆಶಾಭಾವನೆಯಿದೆ ಎಂದರು.
ಮೇಕೆದಾಟು ಯೋಜನೆ 2018ರಿಂದ ಬಾಕಿ ಇದೆ. ಡಿಪಿಆರ್ ಮಾಡಿ, 9 ಸಾವಿರ ಕೋಟಿ ರೂ. ಅಂದಾಜು ವೆಚ್ಚವಾಗಲಿದೆ. ನ್ಯಾಯಾಲಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮೇಕೆದಾಟು ಮಾಡಲಿಕ್ಕೆ ಯಾವ ತಕರಾರು ಇಲ್ಲ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೂ ಅನುಕೂಲವಾಗಲಿದೆ. ತಮಿಳುನಾಡಿನವರು ಕೋರ್ಟ್ನಲ್ಲಿ ಕೇಸ್ ಹಾಕಿದ್ದಾರೆ. ಆದರೆ ಯೋಜನೆಗೆ ಯಾವುದೆ ತಡೆ ನೀಡಿಲ್ಲ. ಅದನ್ನು ಕೂಡ ಕೇಂದ್ರ ಮಂತ್ರಿಗಳ ಗಮನಕ್ಕೆ ತಂದಿದ್ದೇವೆ.
ಮೇಕೆದಾಟು ಯೋಜನೆಯಿಂದ ಕುಡಿಯುವ ನೀರು, ವಿದ್ಯುತ್ ಉತ್ಪಾದನೆಗೆ ಸಹಾಯಕವಾಗಲಿದೆ. ನಮ್ಮ ಪ್ರದೇಶದಲ್ಲಿ ಹೆಚ್ಚುವರಿ ನೀರು ಸಂಗ್ರಹಿಸಲು ಮೇಕೆದಾಟು ಅವಶ್ಯಕವಾಗಿದೆ. 2022ರಲ್ಲಿ 490 ಟಿಎಂಸಿ ಹೆಚ್ಚುವರಿ ನೀರು ಹರಿದು ಹೋಗಿದೆ. ಹೆಚ್ಚುವರಿ ನೀರು ಬಳಿಸಿಕೊಳ್ಳಲು ಎರಡು ರಾಜ್ಯಗಳಿಗೆ ಸಹಾಯಕವಾಗಲಿದೆ ಎಂದರು.