ಬೆಂಗಳೂರು:
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುಗಿದ ಅಧ್ಯಾಯ. 2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು. ಆ ಸಂದರ್ಭದಲ್ಲಿ ನಾನೇ ಮುಖ್ಯಮಂತ್ರಿ ಯಾಗುತ್ತೇನೆಂದು ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ.
ಈಗಾಗಲೇ ಸಿಎಂ ಹುದ್ದೆಯನ್ನು ಬಿಟ್ಟುಕೊಡುವಂತೆ ಒಂದು ಕಡೆಯಿಂದ ಒಕ್ಕಲಿಗ ಸ್ವಾಮೀಜಿಗಳು, ಮತ್ತೊಂದು ಕಡೆಯಿಂದ ಲಿಂಗಾಯ ಸ್ವಾಮೀಜಿಗಳಿಂದ ಆಗ್ರಹಗಳು ಕೇಳಿಬಂದಿವೆ. ಇದರ ನಡುವೆಯೇ, ಸತೀಶ್ ಜಾರಕಿಹೊಳಿಯವರ ಹೇಳಿಕೆ ಹಲವರ ಹುಬ್ಬೇರುವಂತೆ ಮಾಡಿದೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದು ಅಧ್ಯಾಯ, ಆ ಚರ್ಚೆಯನ್ನು ಮುಂದುವರೆಸುವ ಅವಶ್ಯಕತೆ ಇಲ್ಲ. ಯಾರು ಏನೇ ಹೇಳಿದರೂ ಅದೆಲ್ಲಾ ಮುಗಿದುಹೋದ ಅಧ್ಯಾಯ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆಯಂಥ ವಿಚಾರಗಳೆಲ್ಲವೂ ಹೈಕಮಾಂಡ್ ಹಾಗೂ ಪಕ್ಷದ ಪ್ರಮುಖರು ತೀರ್ಮಾನ ಮಾಡುವ ವಿಷಯ. ಈ ಬಗ್ಗೆ ಯಾರೂ ಹಾದಿ ಬೀದಿಯಲ್ಲಿ ಚರ್ಚೆ ಮಾಡಲು ಆಗಲ್ಲ. ಅಷ್ಟೇ ಅಲ್ಲದೆ, ಸಭೆ ಸಮಾರಂಭಗಳಲ್ಲಿ, ವೈಯಕ್ತಿಕವಾಗಿ ಹೇಳಿದರೆ ಅದಕ್ಕೆಲ್ಲಾ ಮಹತ್ವ ಇಲ್ಲ. ಅದೆಲ್ಲವೂ ಪಕ್ಷದ ವೇದಿಕೆಯಲ್ಲೇ ಚರ್ಚೆ ಆಗಬೇಕು ಎಂದು ತಿಳಿಸಿದರು.
ಚುನಾವಣೆಗೂ ಮುಂಚೆ ಸಮುದಾಯಕ್ಕೊಬ್ಬ ಡಿಸಿಎಂ ಹುದ್ದೆ ಬೇಕು ಎಂಬ ಕೂಗು ಇತ್ತು. ಈಗಲೂ ಇದೆ. ಅದನ್ನ ಮಾಡಬೇಕಾ ಬೇಡವಾ ಎನ್ನುವ ವಿಚಾರ ವರಿಷ್ಠರಿಗೆ ಬಿಟ್ಟ ವಿಚಾರ. ಇದೇ ವೇಳೆ, ಒಕ್ಕಲಿಗರಿಗೆ, ಲಿಂಗಾಯತರಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ಬೇಡಿಕೆಯ ನಡುವೆಯೇ ಬಹುದಿನಗಳಿಂದ ಇರುವ ದಲಿತರಿಗೆ ಸಿಎಂ ಹುದ್ದೆ ಸಿಗಬೇಕೆಂಬ ಕೂಗಿನ ಬಗ್ಗೆಯೂ ಅವರು ಏನನ್ನೂ ಮಾತನಾಡಲಿಲ್ಲ. ದಲಿತರು ಮುಖ್ಯಮಂತ್ರಿಯಾಗುವ ವಿಚಾರದ ಬಗ್ಗೆ ನನ್ನ ಬಳಿ ಕೇಳಬೇಡಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನೇ ಕೇಳಿ. ನಮ್ಮ ಹೊಸ ಕೆಲಸ ಅಭಿವೃದ್ಧಿ ಬಗ್ಗೆ ಕೇಳಿ ಅಷ್ಟಕ್ಕೇ ಮಾತ್ರ ಸೀಮಿತ ಎಂದು ಹೇಳಿದರು.
ಜಿಲ್ಲೆಯ ವಿಭಜನೆಗಾಗಿ ನಾವು ಸಹ ಪ್ರಯತ್ನ ಮಾಡುತ್ತಿದ್ದೇವೆ. ನಾವು ಧ್ವನಿ ಕೂಡ ಎತ್ತಿದ್ದೇನೆ. ಅವಕಾಶ ಬಂದೇ ಬರುತ್ತೆ ಎಂಬ ನಂಬಿಕೆ ಇದೆ, ಕಾದು ನೋಡಬೇಕು. ಸರ್ಕಾರದ ಮೇಲೆ ಒತ್ತಡ ಹಾಕಿದ್ದೀವಿ, ಕಾದು ನೋಡೋಣ ಎಂದು ಹೇಳಿದರು.
ಸತೀಶ್ ಜಾರಕಿಹೊಳಿಯನ್ನು ಡಿಸಿಎಂ ಮಾಡಿ: ಮತ್ತೊಬ್ಬ ನಾಯಕ ಆಗ್ರಹ
ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರ ಸಂಬಂಧ ಇದೀಗ ಮತ್ತೊಬ್ಬ ಕಾಂಗ್ರೆಸ್ ನಾಯಕರು ಧ್ವನಿಯೆತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಪಕ್ಷವು ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ರಾಜ್ಯದ ಡಿಸಿಎಂ ಮಾಡಬೇಕೆಂದು ಬೆಳಗಾವಿಯ ಕಾಂಗ್ರೆಸ್ ಶಾಸಕ ಆಸಿಫ್ ಸೇಠ್ ಅವರು ಹೇಳಿದ್ದಾರೆ.
ಸತೀಶ್ ಅವರು ಬೆಳಗಾವಿ ಜಿಲ್ಲೆಯ ಯಮಕನಮರಡಿಯಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಸತೀಶ್ ಅವರನ್ನು ಡಿಸಿಎಂ ಮಾಡುವಂತೆ ಒತ್ತಾಯಿಸುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ವೀರಶೈವ-ಲಿಂಗಾಯತ, ಎಸ್ಸಿ/ಎಸ್ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ಇನ್ನೂ ಮೂರು ಡಿಸಿಎಂಗಳ ಸೃಷ್ಟಿಸಬೇಕೆಂದು ಬೇಡಿಕೆ ಹೆಚ್ಚುತ್ತಿದೆ. ಸದ್ಯ ಒಕ್ಕಲಿಗ ಸಮುದಾಯದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತ್ರ ಡಿಸಿಎಂ ಆಗಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಆಸಿಫ್ ಸೇಠ್ ಅವರು, ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕ ಕೈ ಬಿಟ್ಟಿರುವ ಕಾರಣ ಸತೀಶ್ ಅವರನ್ನು ಡಿಸಿಎಂ ಹುದ್ದೆಗೆ ಏರಿಸಬೇಕು ಎಂದು ಆಗ್ರಹಿಸಿದರು.
ಸತೀಶ್ ಜಾರಕಿಹೊಳಿ ಅವರನ್ನು ಡಿಸಿಎಂ ಮಾಡುವುದರಿಂದ ಉತ್ತರ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ಸತೀಶ್ ಅವರು ಎಲ್ಲ ಸಮುದಾಯಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಎಲ್ಲ ವರ್ಗದ ನಾಯಕ ಎಂದು ಸಾಬೀತುಪಡಿಸಿದ್ದಾರೆ ಎಂದರು.