ಜಮ್ಮು:
ಅಮರನಾಥ ಯಾತ್ರೆ ಆರಂಭವಾದ ಜೂನ್ 29 ರಿಂದ ಇಲ್ಲಿಯವರೆಗೆ 51,000 ಯಾತ್ರಾರ್ಥಿಗಳು ಹಿಮಲಿಂಗದ ದರ್ಶನ ಪಡೆದಿದ್ದಾರೆ. ಸೋಮವಾರ 23,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಹಿಮಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. 6,537 ಯಾತ್ರಾರ್ಥಿಗಳ ಮತ್ತೊಂದು ತಂಡ ಮಂಗಳವಾರ ಎರಡು ಬೆಂಗಾವಲು ಪಡೆಯಲ್ಲಿ ಕಾಶ್ಮೀರಕ್ಕೆ ತೆರಳಿದೆ. ಈ ಯಾತ್ರಿಕರು ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಕಣಿವೆಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಇವರಲ್ಲಿ 2, 106 ಭಕ್ತರು 105 ವಾಹನಗಳ ಬೆಂಗಾವಲು ಪಡೆಯಲ್ಲಿ ಮುಂಜಾನೆ 3.05 ಕ್ಕೆ ಬಾಲ್ಟಾಲ್ ಬೇಸ್ ಕ್ಯಾಂಪ್‌ಗೆ ತೆರಳಿದರೆ, 4,431 ಯಾತ್ರಿಕರು 156 ವಾಹನಗಳ ಬೆಂಗಾವಲು ಪಡೆಯಲ್ಲಿ 3.50 ಕ್ಕೆ ನುನ್ವಾನ್ (ಪಹಲ್ಗಾಮ್) ಬೇಸ್ ಕ್ಯಾಂಪ್‌ಗೆ ತೆರಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರೆಯ ಎರಡೂ ಮಾರ್ಗಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಬೆಳಗಿನ ವೇಳೆಯಲ್ಲಿ ಗುಡುಗು ಸಹಿತ ಲಘು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದರ್ಶನಕ್ಕೆ ತೆರಳುವ ಯಾತ್ರಿಗಳು ಪಹಲ್ಗಾಮ್ ಗುಹೆಯಲ್ಲಿನ ದೇಗುಲಕ್ಕೆ ತೆರಳಲು 48ಕಿ.ಮೀ ದೂರದ ಸಾಂಪ್ರದಾಯಕ ಹಾದಿ ಅಥವಾ ಬಲ್ಟಲ್ ಗುಹೆ ದೇಗುಲದ ಮೂಲಕ 14 ಕಿ.ಮೀ ಮೂಲಕ ಸಾಗಬಹುದು. ಪಹಲ್ಗಾಮ್ ಹಾದಿ ಹಿಡಿದರೆ, ಶಿವಲಿಂಗನ ದರ್ಶನಕ್ಕೆ 4 ದಿನ ಬೇಕು. ಆದರೆ, ಬಾಲ್ಟಾಲ್ ಮಾರ್ಗ ಶಾರ್ಟ್ಕಟ್ ಆಗಿದ್ದು, ಈ ಹಾದಿ ಮೂಲಕ ಸಾಗಿದಲ್ಲಿ ಅದೇ ದಿನ ದರ್ಶನ ಪಡೆದು, ಬೇಸ್ ಕ್ಯಾಂಪ್‌ಗೆ ಹಿಂತಿರುಗಬಹುದು. ಈ ದೇಗುಲ ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಅತ್ಯಂತ ಪವಿತ್ರ ಪೌರಾಣಿಕ ಶಕ್ತಿ ಸ್ಥಳವೆಂದು ಪ್ರಸಿದ್ಧ. 300 ಕಿ.ಮೀ ಉದ್ದದ ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ಎರಡು ಬೇಸ್ ಕ್ಯಾಂಪ್ ಹಾಕಲಾಗುತ್ತದೆ.
ಯಾತ್ರಾರ್ಥಿಗಳಿಗೆ ಆಹಾರ ಪೂರೈಕೆಗಾಗಿ ಯಾತ್ರೆ ಸಾಗುವ ಎರಡು ಮಾರ್ಗಗಳಲ್ಲಿ 124ಕ್ಕೂ ಹೆಚ್ಚು ಲಂಗರ್ (ಸಮುದಾಯಿಕ ಕಿಚನ್) ಸಾರಿಗೆ ಶಿಬಿರ ಸ್ಥಾಪಿಸಲಾಗಿದೆ. ಈ ಬಾರಿ 7 ಸಾವಿರ ಸ್ವಯಂ ಸೇವಕರು ಯಾತ್ರಿಕರ ಸೇವೆ ಸಲ್ಲಿಸುತ್ತಿದ್ದಾರೆ. ಯಾತ್ರಿಗಳ ದಟ್ಟಣೆ ನಿರ್ವಹಿಸಲು, ಜುಲೈ 3 ರಿಂದ ಹೆಚ್ಚುವರಿ ರೈಲುಗಳ ಸಂಚಾರ ಆರಂಭಿಸಲು ರೈಲ್ವೆ ನಿರ್ಧರಿಸಿದೆ. ಎರಡೂ ಮಾರ್ಗಗಳಲ್ಲಿ ಯಾತ್ರಿಗಳಿಗೆ ಹೆಲಿಕಾಪ್ಟರ್ ಸೇವೆಗಳು ಲಭ್ಯವಿದೆ.