ನವದೆಹಲಿ:
ಟಿ20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡ ಬಾರ್ಬಡೋಸ್‌ನಲ್ಲಿ ಪ್ರಶಸ್ತಿ ಗೆದ್ದ ಐದು ದಿನಗಳ ನಂತರ ವಿಶೇಷವಾಗಿ ವ್ಯವಸ್ಥೆಗೊಳಿಸಲಾದ ಚಾರ್ಟರ್ ವಿಮಾನದಲ್ಲಿ ಇಂದು ಗುರುವಾರ ಬೆಳಗಿನ ಜಾವ ದೆಹಲಿಗೆ ಬಂದಿಳಿದಿದೆ. ವಿಶ್ವಕಪ್ ಮುಗಿದು 5 ದಿನಗಳಾದರೂ ಪ್ರತಿಕೂಲ ಹವಾಮಾನದಿಂದಾಗಿ ಭಾರತ ಕ್ರಿಕೆಟ್ ತಂಡಕ್ಕೆ ತವರಿಗೆ ಮರಳಲು ಸಾಧ್ಯವಾಗಿರಲಿಲ್ಲ.
ಕ್ರಿಕೆಟಿಗ ರೋಹಿತ್ ಶರ್ಮಾ ನೇತೃತ್ವದ ತಂಡವು ತನ್ನ ಎರಡನೇ ಟಿ20 ವಿಶ್ವ ಪ್ರಶಸ್ತಿಯನ್ನು ದೇಶಕ್ಕೆ ಗೆದ್ದುಕೊಂಡಿತು, ಈ ಮೂಲಕ ಐಸಿಸಿ ಟ್ರೋಫಿಗಾಗಿ 11 ವರ್ಷಗಳ ಕಾಯುವಿಕೆ ಕಳೆದ ಶನಿವಾರ ಅಂತ್ಯವಾಗಿದೆ.
ಏರ್ ಇಂಡಿಯಾ ವಿಶೇಷ ಚಾರ್ಟರ್ ಫ್ಲೈಟ್ AIC24WC — ಏರ್ ಇಂಡಿಯಾ ಚಾಂಪಿಯನ್ಸ್ 24 ವಿಶ್ವಕಪ್ — ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಿಂದ ಭಾರತೀಯ ಸ್ಥಳೀಯ ಕಾಲಮಾನ ನಿನ್ನೆ ನಸುಕಿನ ಜಾವ 4:50 ರ ಸುಮಾರಿಗೆ ಟೇಕ್ ಆಫ್ ಆಗಿತ್ತು. 16 ಗಂಟೆಗಳ ತಡೆರಹಿತ ಪ್ರಯಾಣದ ನಂತರ ಇಂದು ಬೆಳಗಿನ ಜಾವ 6 ಗಂಟೆಗೆ (IST) ದೆಹಲಿಗೆ ಆಗಮಿಸಿತು. ಭಾರತೀಯ ತಂಡ, ಅದರ ಸಹಾಯಕ ಸಿಬ್ಬಂದಿ, ಆಟಗಾರರ ಕುಟುಂಬಗಳು ಮತ್ತು ಕೆಲವು ಮಂಡಳಿಯ ಅಧಿಕಾರಿಗಳು, ಮಾಧ್ಯಮ ತಂಡದ ಸದಸ್ಯರು ವಿಮಾನದಲ್ಲಿದ್ದರು.
ಇಂದು ಬೆಳಗ್ಗೆ ಪ್ರಧಾನಿಗಳ ಭೇಟಿ:
ಶನಿವಾರ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಇದುವರೆಗೆ ನಾಲ್ಕು ವಿಶ್ವಕಪ್ ಕಿರೀಟವನ್ನು ಗೆದ್ದುಕೊಂಡಿತು. ತಂಡದ ಆಟಗಾರರು ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ 9 ಗಂಟೆ ಸುಮಾರಿಗೆ ಭೇಟಿ ಮಾಡಲಿದ್ದಾರೆ.
ಇದರ ನಂತರ, ತಂಡವು ಮುಂಬೈಗೆ ತೆರಳಿ ತೆರೆದ ಬಸ್ ನಲ್ಲಿ ವಿಜಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿದ್ದು, ನಂತರ ವಾಂಖೆಡೆ ಕ್ರೀಡಾಂಗಣದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.
