ಬೆಂಗಳೂರು:
ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಬಿಜೆಪಿ ಶಾಸಕ ವಿಶ್ವನಾಥ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಲು ಹಾಕಲಾಗಿದ್ದ ಫ್ಲೆಕ್ಸ್ ತಲೆ ಮೇಲೆ ಬಿದ್ದು ವಯೋವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶನಿವಾರ ತನ್ನ ಮೊಮ್ಮಗನನ್ನು ಶಾಲೆಯಿಂದ ಕರೆದುಕೊಂಡು ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಫ್ಲೆಕ್ಸ್ ಬ್ಯಾನರ್ ಬಿದ್ದಿದ್ದು, ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿತ್ತು. ಇದೀಗ ವೃದ್ಧ ಕೋಮಾಗೆ ಜಾರಿದ್ದಾರೆ. ವೃದ್ಧನನ್ನು ರಾಜಾನುಕುಂಟೆ ನಿವಾಸಿ ಭಕ್ತ ವತ್ಸಲಾ (70) ಎಂದು ಗುರುತಿಸಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಫ್ಲೆಕ್ಸ್ ಬಿದ್ದ ಸ್ಥಳ ಸಿಂಗನಾಯಕನಹಳ್ಳಿ ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಿಂಗನಾಯಕನಹಳ್ಳಿ ಯಲಹಂಕ ತಾಲೂಕಿಗೆ ಸೇರಿದ್ದು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ಒತ್ತಿ ಹೇಳಿದೆ. ಕೆಲವು ಮಾಧ್ಯಮಗಳು ಈ ಪ್ರದೇಶ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿದೆ ಎಂದು ತಪ್ಪಾಗಿ ವರದಿ ಮಾಡಿವೆ.
ಬಿಬಿಎಂಪಿ ಈಗಾಗಲೇ ಅನಧಿಕೃತ ಫ್ಲೆಕ್ಸ್ ಬ್ಯಾನರ್‌ಗಳನ್ನು ತೆಗೆದುಹಾಕುತ್ತಿದ್ದು, ತನ್ನ ವ್ಯಾಪ್ತಿಯಲ್ಲಿ ಬ್ಯಾನರ್‌ಗಳನ್ನು ಹಾಕುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಿದೆ.
