ಮುಂಬೈ:
ಮುಂಬೈ ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ, ಅಪಘಾತದ ಸಮಯದಲ್ಲಿ ಕಾರನ್ನು ನಾನೇ ಓಡಿಸುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಆಕೆಯ ಪತಿ ಗಾಯಗೊಂಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಪ್ರಮುಖ ಆರೋಪಿ ಮಿಹಿರ್ ಶಾ ಮತ್ತು ಆತನ ಚಾಲಕ ರಾಜಋಷಿ ಬಿಡಾವತ್ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದ್ದು, “ಇಬ್ಬರೂ ಆರೋಪಿಗಳು ಅಪರಾಧದಲ್ಲಿ ತಮ್ಮ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಮತ್ತು ಪೊಲೀಸರು ಅಪಘಾತದ ದೃಶ್ಯವನ್ನು ಮರುಸೃಷ್ಟಿ ಮಾಡಿದರು.
ಆಡಳಿತಾರೂಢ ಶಿವಸೇನೆ ನಾಯಕ ರಾಜೇಶ್ ಶಾ ಅವರ ಪುತ್ರ 24 ವರ್ಷದ ಮಿಹಿರ್ ಶಾ ಚಲಾಯಿಸುತ್ತಿದ್ದ ಕಾರು ಭಾನುವಾರ ಬೆಳಗ್ಗೆ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ 45 ವರ್ಷದ ಮಹಿಳೆ ಸಾವಿಗೀಡಾಗಿದ್ದರು. ನಂತರ ಮಿಹಿರ್ ಶಾ ತಲೆಮರೆಸಿಕೊಂಡಿದ್ದರು. ಆದರೆ ಮೂರು ದಿನಗಳ ನಂತರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಐಷಾರಾಮಿ ಕಾರಿನ ಟೈರ್ಗಳಲ್ಲಿ ಮಹಿಳೆ ಸಿಲುಕಿಕೊಂಡಿರುವುದು ಮಿಹಿರ್ ಶಾ ಗೊತ್ತಿತ್ತು. ಆದರೂ ಅವರು ಕಾರನ್ನು ನಿಲ್ಲಿಸದೆ ಚಾಲನೆ ಮಾಡಿದರು ಮತ್ತು ಇತರೆ ವಾಹನ ಚಾಲಕರು ಆಕ್ರೋಶಗೊಂಡು ಸಿಗ್ನಲ್ ಮಾಡಿ ಮತ್ತು ನಿಲ್ಲಿಸುವಂತೆ ಕೂಗಿ ಹೇಳಿದರೂ ಕಾರು ನಿಲ್ಲಿಸಲಿಲ್ಲ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಜುಲೈ 16 ರವರೆಗೆ ಪೊಲೀಸ್ ಕಸ್ಟಡಿಯಲ್ಲಿರುವ 24 ವರ್ಷದ ಆರೋಪಿ ಮಿಹಿರ್ ಶಾ ತನ್ನ ಬಳಿ ಡ್ರೈವಿಂಗ್ ಲೈಸೆನ್ಸ್ ಇದೆ ಎಂದು ಹೇಳಿಕೊಂಡಿದ್ದಾನೆ. ಆದರೆ ಅದರ ದಾಖಲೆಯನ್ನು ಇನ್ನೂ ವಶಪಡಿಸಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.