ಬೆಂಗಳೂರು:
ಅಪಾರ್ಟ್ಮೆಂಟ್ ಮತ್ತು ದೇವಸ್ಥಾನಗಳಲ್ಲಿ ಕಳೆದ ಏಳು ವರ್ಷಗಳಿಂದ ಬ್ರ್ಯಾಂಡೆಡ್ ಶೂಗಳನ್ನು ಕಳ್ಳತನ ಮಾಡುತ್ತಿದ್ದ ದುಷ್ಕರ್ಮಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು 10 ಸಾವಿರಕ್ಕೂ ಹೆಚ್ಚು ಜೋಡಿ ಶೂಗಳನ್ನು ಕದ್ದಿದ್ದರು. ಆರೋಪಿಗಳನ್ನು ಬಂಧಿಸಿದ ನಂತರ ಪೊಲೀಸರು ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಸುಮಾರು 715 ಜೋಡಿ ಬ್ರಾಂಡೆಡ್ ಶೂಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಆರೋಪಿಗಳ ಬಳಿಯಿಂದ 10 ಲಕ್ಷ ರು. ಮೌಲ್ಯದ ಶೂಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಗಂಗಾಧರ್ ಮತ್ತು ಯಲ್ಲಪ್ಪ ಬಂಧಿತ ಆರೋಪಿಗಳು. ಈ ಇಬ್ಬರು ಖದೀಮರು ಕದ್ದ ಶೂಗಳನ್ನು ಊಟಿ, ಪುದುಚೇರಿ ಮತ್ತು ಇತರ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಮಾರಾಟ ಮಾಡುತ್ತಿದ್ದರು. ಕದ್ದ ಶೂಗಳನ್ನು ಮಾರಾಟ ಮಾಡಲು ಭಾನುವಾರ ಬಜಾರ್ಗಳನ್ನು ಸಹ ಬಳಸುತ್ತಿದ್ದರು.
ಆರೋಪಿಗಳು ರಾತ್ರಿ ವೇಳೆ ಆಟೋ ರಿಕ್ಷಾದಲ್ಲಿ ಸಂಚರಿಸಿ ಮನೆ, ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ಬೂಟುಗಳನ್ನು ಕದ್ದ ನಂತರ, ಇಬ್ಬರೂ ಅವುಗಳನ್ನು ಸ್ವಚ್ಛಗೊಳಿಸಿ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದ್ದರು.
ವಿದ್ಯಾರಣ್ಯಪುರದ ಬಿಇಎಲ್ ಲೇಔಟ್ನಲ್ಲಿರುವ ಮನೆಯೊಂದರಿಂದ ಶೂ ಹಾಗೂ ಎರಡು ಗ್ಯಾಸ್ ಸಿಲಿಂಡರ್ಗಳನ್ನು ಕಳ್ಳತನ ಮಾಡಿದ್ದರು. ಸೋಮವಾರ ಮನೆ ಮಾಲೀಕರು ದೂರು ದಾಖಲಿಸಿದ್ದಾರೆ. ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಳ್ಳತನಕ್ಕೆ ಬಳಸಿದ ಆಟೋದ ವಿವರಗಳನ್ನು ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ಬುಧವಾರ ಪತ್ತೆ ಹಚ್ಚಿ ಬಂಧಿಸಲಾಗಿದೆ.