ಕಾಸರಗೋಡು:
ಸ್ವಾತಂತ್ರ್ಯ ದಿನಾಚರಣೆಯ ಬಳಿಕ ರಾಷ್ಟ್ರಧ್ವಜವನ್ನು ಕೆಳಗಿಳಿಸುವಾಗ ಚಿಕ್ಕ ವಯಸ್ಸಿನ ಚರ್ಚ್‌ನ ಪಾದ್ರಿಯೊಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮುಳ್ಳೇರಿಯ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಫಾದರ್ ಮ್ಯಾಥ್ಯೂ ಕುಡಿಲಿಲ್ (29) ಮೃತ ದುರ್ದೈವಿ. ಧ್ವಜ ಕಂಬ ಒಂದು ಬದಿಗೆ ವಾಲಿದಾಗ ಪಕ್ಕದ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಸ್ಪರ್ಶಿಸಿದೆ. ಇದರಿಂದಾಗಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಂಜೆ ಧ್ವಜ ಇಳಿಸುವ ವೇಳೆ ಕಂಬಕ್ಕೆ ಸಿಕ್ಕಿಹಾಕಿಕೊಂಡಿದ್ದ ಧ್ವಜವನ್ನು ಬಿಡಿಸಲು ಪಾದ್ರಿಗೆ ಸಾಧ್ಯವಾಗದ ಕಾರಣ, ಕಂಬವನ್ನು ಎತ್ತಲು ಪ್ರಯತ್ನಿಸಿದ್ದಾರೆ. ಅದರ ತೂಕದಿಂದಾಗಿ ಒಂದು ಬದಿಗೆ ವಾಲಿದಾಗ ಹತ್ತಿರದ ಹೈಟೆನ್ಷನ್ ವಿದ್ಯುತ್ ತಂತಿಗೆ ತಾಗಿದ್ದು, ಅವರಿಗೂ ವಿದ್ಯುತ್ ಸ್ಪರ್ಶವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿಲಿಲ್ ಅವರು ಕಣ್ಣೂರು ಜಿಲ್ಲೆಯ ಇರಿಟ್ಟಿಯವರು. ಇನ್ನೋರ್ವ ಪಾದ್ರಿ ಸೆಬಿನ್ ಜೋಸೆಫ್ (28) ಗಾಯಗೊಂಡು ಕರ್ನಾಟಕದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಡಿಲಿಲ್ ಒಂದೂವರೆ ವರ್ಷದ ಹಿಂದೆ ಚರ್ಚ್‌ನ ವಿಕಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಅವರು ತಮ್ಮ ತಾಯಿ ಹಾಗೂ ಒಡಹುಟ್ಟಿದವರನ್ನು ಅಗಲಿದ್ದಾರೆ.