ವಿಶಾಖಪಟ್ಟಣಂ:
ಆಂಧ್ರ ಪ್ರದೇಶದ ಅನಕಪಲ್ಲಿ ಜಿಲ್ಲೆಯ ರಾಂಬಿಲ್ಲಿ ಮಂಡಲದ ಅಚ್ಯುತಪುರಂ ವಿಶೇಷ ಆರ್ಥಿಕ ವಲಯ(SEZ)ದ ಎಸ್ಸೆಂಟಿಯಾ ಅಡ್ವಾನ್ಸ್‌ಡ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್‌ನ ಘಟಕದಲ್ಲಿ ನಿನ್ನೆ ಬುಧವಾರ ರಿಯಾಕ್ಟರ್ ಸ್ಫೋಟಗೊಂಡು ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿರುವುದರಿಂದ ಸಾವು ನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಗಾಯಾಳುಗಳನ್ನು ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಗೆ (KGH) ಸಾಗಿಸಲಾಗುತ್ತಿದೆ. ಕಟ್ಟಡದ ಮೊದಲ ಮಹಡಿಯ ಸ್ಲ್ಯಾಬ್ ಒಳಬಿದ್ದಿರುವುದರಿಂದ ಅವಶೇಷಗಳನ್ನು ತೆಗೆದುಹಾಕಲು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಘಟನೆಯ ಸಮಯದಲ್ಲಿ ಕಾರ್ಖಾನೆಯ ಒಳಗೆ ಎಷ್ಟು ಕಾರ್ಮಿಕರಿದ್ದರು ಎಂದು ಇನ್ನೂ ನಿಖರವಾಗಿ ಪತ್ತೆಯಾಗಿಲ್ಲ.
ಅವಶೇಷಗಳ ಅಡಿಯಲ್ಲಿ ಹಲವಾರು ಮಂದಿ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಆರು ಅಗ್ನಿಶಾಮಕ ಟೆಂಡರ್‌ಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಅಕ್ಕಪಕ್ಕದ ಠಾಣೆಗಳಿಂದ ಹೆಚ್ಚುವರಿ ಉಪಕರಣಗಳನ್ನು ಸಜ್ಜುಗೊಳಿಸಲಾಯಿತು. ಅನಕಪಲ್ಲಿ ಜಿಲ್ಲಾಧಿಕಾರಿ ಮತ್ತು ಎಸ್ಪಿ ಇಬ್ಬರೂ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಸರ್ಕಾರದ ಪ್ರಕಟಣೆಯ ಪ್ರಕಾರ, ಅಪಘಾತವು ರಿಯಾಕ್ಟರ್ ಸ್ಫೋಟದ ಪರಿಣಾಮವಾಗಿ ಸಂಭವಿಸಿದೆ ಎಂದು ಆರಂಭದಲ್ಲಿ ಹೇಳಲಾಗಿದ್ದರೂ, ದ್ರಾವಕ ತೈಲವನ್ನು ಒಂದು ಮಹಡಿಯಿಂದ ಇನ್ನೊಂದಕ್ಕೆ ಪಂಪ್ ಮಾಡಿ ಬೆಂಕಿ ಹೊತ್ತಿಕೊಂಡ ನಂತರ ಸಂಭವಿಸಿದ ದೊಡ್ಡ ಸ್ಫೋಟದಿಂದಾಗಿ ದುರ್ಘಟನೆ ಸಂಭವಿಸಿದೆ. ನಿನ್ನೆ ಮಧ್ಯಾಹ್ನ ಊಟದ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಕಾರ್ಖಾನೆಯಲ್ಲಿ 381 ಉದ್ಯೋಗಿಗಳು ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ.
ದುರ್ಘಟನೆ ಬಗ್ಗೆ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಟೆಲಿಕಾನ್ಫರೆನ್ಸ್ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದು, ಉನ್ನತ ಮಟ್ಟದ ತನಿಖೆ ನಡೆಸಿ ಸಮಗ್ರ ವರದಿಯನ್ನು ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಗಾಯಾಳು ಕಾರ್ಮಿಕರಿಗೆ ಸಾಂತ್ವನ ಹೇಳಲು ಸಿಎಂ ಇಂದು ಅನಕಾಪಲ್ಲಿಗೆ ಭೇಟಿ ನೀಡಲಿದ್ದಾರೆ.
ಜೀವಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಮೃತರ ಕುಟುಂಬಸ್ಥರಿಗೆ ಸರ್ಕಾರ ನೆರವಾಗಲಿದೆ ಎಂದಿದ್ದಾರೆ. ಈ ವರೆಗೆ 17 ಮಂದಿ ಮೃತಪಟ್ಟಿದ್ದು, ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಎಲ್ಲಾ ವೈದ್ಯಕೀಯ ಸಿಬ್ಬಂದಿಯನ್ನು ಸಜ್ಜುಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
