ನವದೆಹಲಿ:
ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಕೊಲೆ, ಅತ್ಯಾಚಾರ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಇಂದು ಆ.22 ರಂದು ಕೋರ್ಟ್ ಕಲಾಪದ ಘನತೆ, ಗಾಂಭೀರ್ಯಕ್ಕೆ ತಕ್ಕಂತೆ ನಡೆದುಕೊಳ್ಳದ ಹಿರಿಯ ಅಡ್ವೊಕೇಟ್, ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ವಕೀಲ ಕಪಿಲ್ ಸಿಬಲ್, ಸೂಕ್ಷ್ಮತೆಯನ್ನು ಮರೆತು ವರ್ತಿಸಿರುವುದು ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿದೆ.
ವಿಚಾರಣೆ ವೇಳೆ ನಗುತ್ತಾ ಕುಳಿತಿದ್ದ ಕಪಿಲ್ ಸಿಬಲ್ ವರ್ತನೆಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತಮ್ಮ ಸಹೋದ್ಯೋಗಿಯನ್ನು ವಾದ ಮಂಡನೆಯ ನಡುವೆಯೇ ತರಾಟೆಗೆ ತೆಗೆದುಕೊಂಡರು. “ದಯವಿಟ್ಟು ನಗಬೇಡಿ, ಓರ್ವ ಹೆಣ್ಣುಮಗಳನ್ನು ಅತ್ಯಂತ ಅಮಾನುಷವಾಗಿ ಹತ್ಯೆ ಮಾಡಲಾಗಿದೆ” ಎಂದು ತುಷಾರ್ ಮೆಹ್ತಾ ಕಪಿಲ್ ಸಿಬಲ್ ಗೆ ಬುದ್ಧಿ ಹೇಳಿದರು.
“ಪೊಲೀಸ್ ಠಾಣೆಯಿಂದ ಹಿಂತಿರುಗಿದ ನಂತರ, ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ. ಈ ಯುಡಿ ಪ್ರಕರಣವನ್ನು ರಾತ್ರಿ 11:30 ಕ್ಕೆ ಮತ್ತು ರಾತ್ರಿ 11.45 ಕ್ಕೆ, ಎಫ್ಐಆರ್ ದಾಖಲಿಸಲಾಗಿದೆ. ಅದು ಕಾಲಾನುಕ್ರಮವಾಗಿದೆ” ಎಂದು ಎಸ್ಜಿ ತುಷಾರ್ ಮೆಹ್ತಾ ಹೇಳಿದರು.
ಪೊಲೀಸರು ನಡೆಸಿದ ಕಾನೂನು ವಿಧಿವಿಧಾನಗಳ ಅನುಕ್ರಮ ಮತ್ತು ಸಮಯವನ್ನು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠ, ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸುವ ಮೊದಲು ಆಗಸ್ಟ್ 9 ರಂದು ಸಂಜೆ 6.10 ರಿಂದ 7.10 ರ ನಡುವೆ ಮರಣೋತ್ತರ ಪರೀಕ್ಷೆ ನಡೆಸಿರುವುದು ತುಂಬಾ ಆಶ್ಚರ್ಯಕರವಾಗಿದೆ ಎಂದು ಹೇಳಿದರು.