ಬೆಂಗಳೂರು
ಕೆಐಎಡಿಬಿಯಿಂದ ಅಕ್ರಮವಾಗಿ ಭೂಮಿ ಪಡೆದ ಆರೋಪ ಸಂಬಂಧ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಸಲೀಂ ಅಹ್ಮದ್ ನೇತೃತ್ವದ ಕಾಂಗ್ರೆಸ್ ಸದಸ್ಯರ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ. ಛಲವಾದಿ ನಾರಾಯಣಸ್ವಾಮಿ ಕೆಐಎಡಿಬಿಯಿಂದ ಬೇರೆಯವರ ಹೆಸರಲ್ಲಿ ಭೂಮಿ ಪಡೆದು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಸದಸ್ಯರು ತನಿಖೆ ನಡೆಸಲು ಅನುಮತಿ ನೀಡುವಂತೆ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ನೇತೃತ್ವದ ನಿಯೋಗದಲ್ಲಿ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ವಸಂತ ಕುಮಾರ್, ಪುಟ್ಟಣ್ಣ, ರವಿ, ಉಮಾಶ್ರೀ ಹಾಗೂ ಸುಧಾಮ್ ದಾಸ್, ದಿನೇಶ್ ಗೂಳಿಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಕೆಐಎಡಿಬಿ ಸಿಎ ನಿವೇಶನ ಹಂಚಿಕೆಯಲ್ಲಿ ಇಬ್ಬಗೆ ನೀತಿ ಆರೋಪ ಕೇಳಿಬಂದಿದೆ. ಸರ್ಕಾರದ ಇಲಾಖೆಗೆ ಜಾಗ ನೀಡಲು ಮೀನಾಮೇಷ ಎಣಿಸಲಾಗುತ್ತಿದ್ದು, ಖಾಸಗಿ ಟ್ರಸ್ಟ್, ಕಂಪೆನಿಗಳಿಗೆ ಸಿಎ ನಿವೇಶನ ನೀಡಲು ಕೆಐಎಡಿಬಿ ಅತ್ಯುತ್ಸಾಹ ತೋರಿದೆ ಎನ್ನಲಾಗಿದೆ.
ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಜಾಗ ನೀಡುವ ಕೆಐಎಡಿಬಿ, ಸರ್ಕಾರದ ಇಲಾಖೆಗೆ ಜಾಗ ನೀಡಿಲ್ಲ. ಇದೇ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ನಲ್ಲೇ ಸಮಾಜ ಕಲ್ಯಾಣ ಇಲಾಖೆ ಜಾಗಕ್ಕಾಗಿ ಅರ್ಜಿ ಹಾಕಿತ್ತು. ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಎರಡು ಎಕರೆ ಜಾಗಕ್ಕಾಗಿ ಮನವಿ ಮಾಡಿದ್ದರು. ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಸ್ಕಿಲ್ ಡೆವಲಪ್ಮೆಂಟ್ ಕೇಂದ್ರ ಮಾಡಲು ಇಲಾಖೆ ಜಾಗ ಕೇಳಿತ್ತು. ಆದರೆ ಕೆಐಎಡಿಬಿ ಸಮಾಜ ಕಲ್ಯಾಣ ಇಲಾಖೆಗೆ ಜಾಗ ನೀಡಿಲ್ಲ. ಜಾಗ ಹಂಚಿಕೆಗೆ ಸಮಾಜ ಕಲ್ಯಾಣ ಇಲಾಖೆಯ ಮನವಿ ಪುರಸ್ಕರಿಸಬಹುದು ಎಂದು ಏಕಗವಾಕ್ಷಿ ಸಮಿತಿ ಕೂಡ ಶಿಫಾರಸ್ಸು ಮಾಡಿತ್ತು. ಆದರೆ ಪ್ರಾಜೆಕ್ಟ್ ರಿಪೋರ್ಟ್ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಅರ್ಜಿಯನ್ನು ಕೆಐಎಡಿಬಿ ಪರಿಗಣಿಸಿಲ್ಲ.