2024 ರಲ್ಲಿ ವಿಮಾನಯಾನ ಸಂಸ್ಥೆಗಳಿಗೆ 728 ಹುಸಿ ಬಾಂಬ್ ಬೆದರಿಕೆ, 13 ಜನರ ಬಂಧನ: ಕೇಂದ್ರ ಸರ್ಕಾರದಿಂದ ಮಾಹಿತಿ

ನವದೆಹಲಿ:

    2024 ರಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಒಟ್ಟು 728 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಈ ಪೈಕಿ ಇಂಡಿಗೋ ಏರ್‌ಲೈನ್ಸ್ ಅತಿ ಹೆಚ್ಚು ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿದೆ. ಏರ್ ಇಂಡಿಯಾ ಮತ್ತು ವಿಸ್ತಾರಾ ನಂತರದ ಸ್ಥಾನದಲ್ಲಿ ಇವೆ. 2024 ರಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇವಲ 13 ಜನರನ್ನು ಮಾತ್ರ ಬಂಧಿಸಲಾಗಿದೆ.

   ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, 2024 ರಲ್ಲಿ 728 ಬಾಂಬ್ ಬೆದರಿಕೆಗಳು ಬಂದಿವೆ. ಅವುಗಳಲ್ಲಿ 714 ದೇಶೀಯ ವಿಮಾನಯಾನ ಸಂಸ್ಥೆಗಳು ಸ್ವೀಕರಿಸಿದ್ದು, ಉಳಿದವು ಕೆಲವು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಸ್ವೀಕರಿಸಿವೆ. ಈ ಕುರಿತು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು, ವಿದೇಶಿ ವಿಮಾನಯಾನ ಸಂಸ್ಥೆಗಳು ಒಟ್ಟು 14 ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿವೆ ಎಂದು ಹೇಳಿದರು.

   ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಎಮಿರೇಟ್ಸ್ ಮತ್ತು ಏರ್ ಅರೇಬಿಯಾ ಕ್ರಮವಾಗಿ ಐದು ಮತ್ತು ಮೂರು ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿದ್ದರೆ, ಏರೋಫ್ಲೋಟ್, ಏರ್ ಕೆನಡಾ, ಕ್ಯಾಥೆ ಪೆಸಿಫಿಕ್, ಎತಿಹಾದ್, ನೋಕ್ ಏರ್ ಮತ್ತು ಥಾಯ್ ಲಯನ್ ಏರ್ ತಲಾ ಒಂದು ಬೆದರಿಕೆಯನ್ನು ಸ್ವೀಕರಿಸಿವೆ.

   ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ(BCAS) ಅಂಕಿಅಂಶಗಳ ಪ್ರಕಾರ, ಇಂಡಿಗೋಗೆ ಅತಿ ಹೆಚ್ಚು ಅಂದರೆ 216 ಬಾಂಬ್ ಬೆದರಿಕೆಗಳು ಬಂದಿವೆ. ನಂತರ ಏರ್ ಇಂಡಿಯಾ(179), ವಿಸ್ತಾರಾ(153), ಆಕಾಶ ಏರ್ (72), ಸ್ಪೈಸ್‌ಜೆಟ್ (35), ಅಲೈಯನ್ಸ್ ಏರ್ (26), ಏರ್ ಇಂಡಿಯಾ ಎಕ್ಸ್‌ಪ್ರೆಸ್ (19) ಮತ್ತು ಸ್ಟಾರ್ ಏರ್ (14) ಬೆದರಿಕೆ ಬಂದಿವೆ.

   “ಹುಸಿ ಬಾಂಬ್ ಬೆದರಿಕೆಗಳಿಗೆ ಸಂಬಂಧಿಸಿದಂತೆ 2024 ರಲ್ಲಿ ಒಟ್ಟು 13 ಜನರನ್ನು ಬಂಧಿಸಲಾಗಿದೆ” ಎಂದು ಮೊಹೋಲ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link