ಬೆಂಗಳೂರು:
ಈ ಬಾರಿ ಗಣೇಶೋತ್ಸವ ಆಚರಣೆ ವೇಳೆ ಡಿಜೆ ಬಳಕೆಗೆ ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಹಾಗಿದ್ದರೆ ಎರಡೇ ದಿನದಲ್ಲಿ ಬರುವ ಈದ್ ಮಿಲಾದ್ ಕತೆಯೇನು ಎಂಬುದಕ್ಕೂ ಈಗ ಸ್ಪಷ್ಟನೆ ಸಿಕ್ಕಿದೆ. ಇದೇ ವಾರಂತ್ಯಕ್ಕೆ ಗಣೇಶ ಹಬ್ಬ ಬರುತ್ತಿದೆ.ಹೀಗಾಗಿ ಅಲ್ಲಲ್ಲಿ ಗಣೇಶನ ಮೂರ್ತಿ ಕೂರಿಸಿ ಜೋರಾಗಿ ಮ್ಯೂಸಿಕ್ ಹಾಕಿ ಜನ ಸಂಭ್ರಮಾಚರಿಸುವುದು ಸಹಜ. ಆದರೆ ಈ ಬಾರಿ ರಾಜ್ಯ ಸರ್ಕಾರ ಕೆಲವೊಂದು ಷರತ್ತು ವಿಧಿಸಿದೆ. ಗಲ್ಲಿ ಗಲ್ಲಿಯಲ್ಲಿ ಗಣೇಶ ಕೂರಿಸುವ ಮೊದಲು ಸ್ಥಳೀಯಾಡಳಿತದ ಒಪ್ಪಿಗೆ ಪಡೆಯಬೇಕು.
ಯಾರೂ ರಸ್ತೆ ಅಡ್ಡಗಟ್ಟಿ ಗಣೇಶನ ಮೂರ್ತಿ ಕೂರಿಸುವಂತಿಲ್ಲ. ರಾತ್ರಿ 10 ರ ನಂತರ ಗಣೇಶ ವಿಸರ್ಜನೆ ಮಾಡುವಂತಿಲ್ಲ. ಜೊತೆಗೆ ಡಿಜೆ ಸೌಂಡ್ ಹಾಕಿ ಇತರರಿಗೆ ತೊಂದರೆ ಮಾಡುವಂತಿಲ್ಲ ಎಂದು ನಿಷೇಧ ಹೇರಿದೆ. ಗಣೇಶ ಹಬ್ಬ ಮುಗಿದ ಬಳಿಕ ಮುಸಲ್ಮಾನ ಬಾಂಧವರ ಈದ್ ಹಬ್ಬ ಬರುತ್ತಿದೆ.
ಸೆಪ್ಟೆಂಬರ್ 7 ಕ್ಕೆ ಗಣೇಶ ಹಬ್ಬವಾದರೆ ಸೆಪ್ಟೆಂಬರ್ 15-16 ಕ್ಕೆ ಈದ್ ಮಿಲಾದ್ ಹಬ್ಬವಿದೆ. ಈ ಹಬ್ಬಕ್ಕೂ ಡಿಜೆಗೆ ಅವಕಾಶವಿಲ್ಲ ಎಂದು ಸರ್ಕಾರ ಫರ್ಮಾನು ಹೊರಡಿಸಿದೆ. ಡಿಜೆ ಸಿಸ್ಟಂಗಳನ್ನು ಎರಡೂ ಹಬ್ಬಕ್ಕೆ ನಿಷೇಧಿಸಲಾಗಿದೆ. ಡಿಜೆ ಸೌಂಡ್ ಹಾಕಿದರೆ ಚಿಕ್ಕಮಕ್ಕಳಿಗೆ, ವಯಸ್ಸಾದವರಿಗೆ, ದುರ್ಬಲ ಹೃದಯದವರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ಆದೇಶ ಹೊರಡಿಸಲಾಗಿದೆ. ಎರಡೂ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಸರ್ಕಾರ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ.