ಬೆಂಗಳೂರು:
ಮೆಟ್ರೋ ಸಂಚಾರವನ್ನು ಬಿಡದಿವರೆಗೆ ವಿಸ್ತರಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬಿಡದಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆಯ ತಾಂತ್ರಿಕ ತರಬೇತಿ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಬಿಡದಿಯ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ಹೇಳಿದರು.
ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆ ಆಟೋಮೊಬೈಲ್ ಕ್ಷೇತ್ರದಲ್ಲಿ ಉತ್ತಮ ಹೆಸರುಗಳಿಸಿದ್ದು, ಉತ್ಪಾದನಾ ವಲಯದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಕರ್ನಾಟಕ ರಾಜ್ಯದೊಂದಿಗೆ ವಿವಿಧ ಹೂಡಿಕೆ ಮಾಡುವ ಮೂಲಕ ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆ ತಂತ್ರಜ್ಞಾನ ಹಾಗೂ ಹೊಸ ಉದ್ಯಮ ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.ಈ ಸಂಸ್ಥೆಯಿಂದ ಬಿಡದಿಯಲ್ಲಿ ಸ್ಥಾಪಿತವಾದ ತಾಂತ್ರಿಕ ತರಬೇತಿ ವಿಭಾಗ ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸಿ, ಅವರ ಭವಿಷ್ಯಕ್ಕೆ ಉತ್ತಮ ಅಡಿಪಾಯ ಹಾಕಲಿದೆ ಎಂದರು.