ನಾಯಕತ್ವ ಬದಲಾವಣೆ ವಿಚಾರ ಬಿಟ್ಟು ಸರ್ಕಾರ ನಡೆಸಲು ಹೈಕಮಾಂಡ್‌ ಸೂಚನೆ …!

ಬೆಂಗಳೂರು:

   ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರೀ ಸುದ್ದಿಯಾಗುತ್ತಿದ್ದು, ಮುಡಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿದ್ದರೂ ಇಂತಹ ಒತ್ತಡ ತಂತ್ರಗಳಿಗೆ ಮಣಿಯುವುದಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಿದೆ.

   ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿತ್ತು, ನಾಯಕತ್ವ ಬದಲಾವಣೆಯಾಗಲೇಬೇಕಾದ ಪರಿಸ್ಥಿತಿ ಎದುರಾದರೆ ಪಕ್ಷದ ವರ್ಚಸ್ಸು ರಕ್ಷಣೆ ಹಾಗೂ ಸರ್ಕಾರ ಉಳಿವಿಗಾಗಿ ಸುಗಮ ರೀತಿಯಲ್ಲಿ ನಾಯಕತ್ವ ಬದಲಾವಣೆ ಮಾಡಲು ತಂತ್ರ ರೂಪಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.ಈ ತಂತ್ರದ ಭಾಗವಾಗಿ, ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಜಾತಿ ಗಣತಿ ವರದಿಯನ್ನು ಜಾರಿಗೆ ತರಲು ಮುಂದಾಗಿದೆ.

   ಈ ನಡುವೆ ಸರ್ಕಾರ ಪತನಗೊಂಡರೂ ಪರವಾಗಿಲ್ಲ, ಆದರೆ, ಸರ್ಕಾರ ಜಾತಿಗಣತಿ ವರದಿ ಜಾರಿಗೆ ತರಬೇಕು ಎಂದು ಪಕ್ಷದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಭಾನುವಾರ ಹೇಳಿದ್ದು, ಹರಿಪ್ರಸಾದ್ ಅವರ ಈ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ತಲೆನೋವನ್ನುಂಟು ಮಾಡಿದೆ.

   ಈ ಸರ್ಕಾರ ಬರಲು ಶೋಷಿತ ಸಮುದಾಯಗಳೇ ಕಾರಣ. ಸರ್ಕಾರ ಬಿದ್ದರೆ ಬೀಳಲಿ. ಏಕೆ ಹೆದರಬೇಕು? ಜಾತಿಗಣತಿಯನ್ನ ಮೊದಲು ಬಿಡುಗಡೆ ಮಾಡಿ. ಜಾತಿಗಣತಿ ವರದಿ ಜಾರಿಗೆ ಬರಲಿ. ಜಾತಿಗಣತಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇದೆ. ಆದರೆ ಸರ್ಕಾರ ಏಕೆ ಯೋಚನೆ ಮಾಡುತ್ತಿದೆ? ಮೊದಲು ಜಾತಿಗಣತಿ ಜಾರಿ‌ ಮಾಡಲಿ. ಎಲ್ಲ ಸಮುದಾಯಕ್ಕೆ ಅನುಕೂಲ ಇದೆ. ಜಾತಿಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅಂದರೆ ಹೋಗಲಿ ಎಂದು ಹರಿಪ್ರಸಾದ್ ಹೇಳಿದ್ದಾರೆ.

  ಏತನ್ಮಧ್ಯೆ ಜಾತಿ ಗಣತಿ ವರದಿ ಜಾರಿ ಮಾಡಿದ್ದೇ ಆದರೆ, ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ) ಸಮುದಾಯಗಳ ಬೆಂಬಲ ಮರಳಿ ಸಿಗುವ ಹಾಗೂ ಮುಡಾ-ವಾಲ್ಮೀಕಿ ನಿಗಮ ಹಗರಣದಿಂದ ಕುಸಿದಿರುವ ಪಕ್ಷದ ವರ್ಚಸ್ಸನ್ನು ಮರಳಿ ಪಡೆಯಲು ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

   ನಿನ್ನೆಯಷ್ಟೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಭೇಟಿ ಮಾಡಿದ್ದು, ಭೇಟಿ ವೇಳೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

   ಸತೀಶ್ ಜಾರಕಿಹೊಳಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ.ಸುರೇಶ್ ಅವರು, ಸಿಎಂ ಬದಲಾವಣೆ ಸಾಧ್ಯವಿಲ್ಲ ಹಾಗೂ ಈ ಬಗ್ಗೆ ಚರ್ಚೆಯನ್ನೂ ಮಾಡಿಲ್ಲ. ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲಿದ್ದಾರೆ. ಮುಡಾ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದ್ದು, ನ್ಯಾಯಾಲಯದ ಆದೇಶದಂತೆ ತನಿಖೆ ನಡೆಯುತ್ತಿದೆ. ಸಿದ್ದರಾಮಯ್ಯ ಮತ್ತು ಸರ್ಕಾರ ಹಗರಣ ಆರೋಪಗಳಿಂದ ಹೊರಬರಲಿದೆ ಎಂದು ಹೇಳಿದರು.

   ಜಾರಿ ನಿರ್ದೇಶನಾಲಯ (ಇಡಿ) ಸಿದ್ದರಾಮಯ್ಯ ಅವರನ್ನು ಬಂಧಿಸಲು ಸಾಧ್ಯವಿಲ್ಲ. ಏಕೆಂದರೆ, ಸಿದ್ದರಾಮಯ್ಯ ಯಾವುದೇ ಅಕ್ರಮ ಹಣವನ್ನು ತಮ್ಮಲ್ಲಿ ಇರಿಸಿಕೊಂಡಿಲ್ಲ. ಇದಲ್ಲದೆ, ಆರೋಪ ಕೇಳಿಬಂದಿರುವ ನಿವೇಶನಗಳನ್ನೂ ಮುಡಾಕ್ಕೆ ಹಿಂತಿರುಗಿಸಲಾಗಿದೆ. ಪ್ರಕರಣದ ತನಿಖೆಗಾಗಿ ರಚಿಸಲಾದ ಲೋಕಾಯುಕ್ತ ಮತ್ತು ನ್ಯಾಯಾಂಗ ಆಯೋಗವು ಇನ್ನೂ ವರದಿಗಳನ್ನು ಸಲ್ಲಿಸಬೇಕಿದೆ ಎಂದು ತಿಳಿಸಿದರು.ಈ ನಡುವೆ ಹಿರಿಯ ಮುಖಂಡ, ಮಾಜಿ ಸಚಿವ ಪಿಜಿಆರ್ ಸಿಂಧ್ಯ ಅವರು ನೀಡಿರುವ ಹೇಳಿಕೆಯೊಂದು ಕುತೂಹಲ ಮೂಡಿಸಿದೆ.

   ಕಳೆದ ವರ್ಷ ಹೈಕಮಾಂಡ್ ಮಟ್ಟದಲ್ಲಿ ನಡೆದ ಒಪ್ಪಂದದಂತೆ ಎರಡೂವರೆ ವರ್ಷಗಳ ನಂತರ ಸಿಎಂ ಸ್ಥಾನವನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹಸ್ತಾಂತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಂಧ್ಯ ಸಲಹೆ ನೀಡಿದ್ದಾರೆ.

   ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಅದೇನು ಮಾತಕತೆ ಒಪ್ಪಂದ ಆಗಿದೆಯೋ ಗೊತ್ತಿಲ್ಲ. ಆಗಿದ್ದರೆ ಅದರಂತೆ ನೀವು ನಡೆದುಕೊಳ್ಳಿ ಅದು ನಿಮಗೆ ಬಿಟ್ಟಿದ್ದು. ಆದರೆ ನಿಮ್ಮ ರಾಜೀನಾಮೆ ಕೇಳುವ ಇವರೆಲ್ಲಾ ಯಾರು? ಗಾಜಿನಮನೆಯಲ್ಲಿ ಕುಳಿತು ಕಲ್ಲು ಹೊಡೆಯುವವರು. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಏನು ಕಾಮೆಂಟ್ ಮಾಡ್ತಾರೆ. ಸಿದ್ದರಾಮಯ್ಯನವರೆ ಧೈರ್ಯವಾಗಿ ಮುನ್ನುಗ್ಗಿ ನೀವು ತಪ್ಪು ಮಾಡಿಲ್ಲ. ನೀವು ಡಿ.ಕೆ.ಶಿವಕುಮಾರ್ ಅವರನ್ನು ಬೆಳೆಸಬೇಕು. ಅವರಿಗೆ ಇನ್ನೂ 25 ವರ್ಷದ ರಾಜಕಾರಣ ಇದೆ ಎಂದು ಹೇಳಿದ್ದಾರೆ.

   ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಡಿಕೆ.ಶಿವಕುಮಾರ್ ಅವರು, ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತೀನಿತ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾಹಿತಿ ನೀಡುತ್ತಿದ್ದೇನೆ. ಖರ್ಗೆಯವರಿಗೆ ಎಲ್ಲಾ ಬೆಳವಣಿಗೆಗಳ ಬಗ್ಗೆ ತಿಳಿದಿದೆ. ಪಕ್ಷಕ್ಕೆ ಲಾಭವಾಗದ ಹೊರತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವರು ಸಿದ್ಧರಿಲ್ಲ ಎಂದು ಹೇಳಿದರು.

Recent Articles

spot_img

Related Stories

Share via
Copy link
Powered by Social Snap