ಉಡುಪಿ
ಮಲ್ಪೆ ಸಮೀಪದ ಹೂಡೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಮಲ್ಪೆ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಅಕ್ರಮ ನಿವಾಸಿಗಳಲ್ಲೋರ್ವನಾದ ಮೊಹಮ್ಮದ್ ಮಾಣಿಕ್ ಹುಸೇನ್ (26) ಎಂಬಾತ ದುಬೈಗೆ ತೆರಳಲಿದ್ದು, ಬಜ್ಜೆಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಮಿಗ್ರೇಶನ್ ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದ. ನಕಲಿ ಪಾಸ್ ಪೋರ್ಟ್ ಹೊಂದಿದ್ದ. ಮಲ್ಪೆ ಪೊಲೀಸರಿಗೊಪ್ಪಿಸಿದ ಆತನನ್ನು ವಿಚಾರಿಸಿದಾಗ ಆತ ಕಳೆದ 5 ವರ್ಷದಿಂದ ಗುಜ್ಜರಬೆಟ್ಟಿನಲ್ಲಿ ವಾಸವಾಗಿದ್ದು ಕಟ್ಟಡ ಕಾರ್ಮಿಕನಾಗಿದ್ದ ವಿಚಾರ ಬೆಳಕಿಗೆ ಬಂತು. ಆತ ಪಶ್ಚಿಮ ಬಂಗಾಳ ಗಡಿ ಮೂಲಕ ಭಾರತಕ್ಕೆ ಅಕ್ರಮ ಪ್ರವೇಶ ಪಡೆದಿದ್ದ.
ಆತನೊಂದಿಗೆ ಇತರ 6 ಮಂದಿ ಕಳೆದ 3-4 ವರ್ಷದಿಂದ ನೆಲೆಸಿದ್ದು ಅವರೆಲ್ಲರೂ ನಕಲಿ ಆಧಾರ್ ಕಾರ್ಡ್ ಹಾಗೂ ನಕಲಿ ಪಾಸ್ ಪೋರ್ಟ್ ಇತ್ಯಾದಿ ಹೊಂದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಏಳು ಮಂದಿಯನ್ನೂ ವಶಕ್ಕೆ ಪಡೆದು ಹೆಚ್ಚಿನ ತನಿಖೆಗೊಳಪಡಿಸಲಾಗಿದೆ ಎಂದು ಎಸ್.ಪಿ. ಡಾ.ಕೆ. ಅರುಣ್ ತಿಳಿಸಿದ್ದಾರೆ.