ಜೈ ಶ್ರೀರಾಮ್ ಘೋಷಣೆ : ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ : ಹೈಕೋರ್ಟ್

ಬೆಂಗಳೂರು:

    ಜೈ ಶ್ರೀರಾಮ್ ಘೋಷಣೆ ಕೂಗಿದ ಕೂಡಲೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಹೈಕೋರ್ಟ್ ಮಂಗಳವಾರ ಹೇಳಿದೆ.ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಮಸೀದಿ ಆವರಣಕ್ಕೆ ನುಗ್ಗಿ ಜೈ ಶ್ರೀರಾಮ್ ಘೋಷಣೆ ಕೂಗಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳ ವಿರುದ್ಧ ಧಾರ್ಮಿಕ ನಂಬಿಕೆಗಳ ಧಕ್ಕೆ ತಂದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದ ಹೈಕೋರ್ಟ್, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

   ದಕ್ಷಿಣ ಕನ್ನಡದ ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳದ ಬದ್ರಿಯಾ ಜುಮ್ಮಾ ಮಸೀದಿಯ ಆವರಣ ಪ್ರವೇಶಿಸಿ, ಜೈ ಶ್ರೀರಾಮ್ ಘೋಷಣೆ ಕೂಗಿದ ಆರೋಪದಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು.

   ಎಫ್‌ಐಆರ್ ಮತ್ತು ಈ ಸಂಬಂಧ ಪುತ್ತೂರು 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಬಿಳಿನೆಲೆ ಗ್ರಾಮದ ಯುವಕರಾದ ಕೀರ್ತನ್ ಕುಮಾರ್ ಹಾಗೂ ಎನ್.ಎಂ.ಸಚಿನ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗಳನ್ನು ಹೇಗೆ ಕೆರಳಿಸುತ್ತದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದೆ.

   ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 295-ಎ ಅಡಿ ಪ್ರಕರಣ ದಾಖಲಿಸಲಾಗಿದೆ. ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಆ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಉದ್ದೇಶಪೂರ್ವಕವಾಗಿ ಇಲ್ಲವೇ ದುರುದ್ದೇಶಪೂರ್ವಕವಾಗಿ ಕೆರಳಿಸುವ ಕೃತ್ಯವನ್ನು ಐಪಿಸಿ ಸೆಕ್ಷನ್ 295-ಎ ಹೇಳುತ್ತದೆ. ಆದರೆ, ಯಾರಾದರೂ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ಅದು ಇನ್ಯಾವುದೋ ವರ್ಗದ ಧಾರ್ಮಿಕ ಭಾವನೆಗಳನ್ನು ಹೇಗೆ ಕೆರಳಿಸುತ್ತದೆ ಎಂದು ಅರ್ಥವಾಗುತ್ತಿಲ್ಲ.

    ಕಡಬ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ಖುದ್ದು ದೂರುದಾರರೇ ಹೇಳಿದ್ದಾರೆ. ಹೀಗಿರುವಾಗ, ಇಂತಹ ಘಟನೆ ಆ ಪ್ರದೇಶದಲ್ಲಿ ಸೌಹಾರ್ದತೆಗೆ ಧಕ್ಕೆ ತರುತ್ತದೆ ಎಂದು ಕಲ್ಪಿಸಿಕೊಳ್ಳುವುದಕ್ಕೆ ಯಾವುದೇ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ ಆರೋಪಿಗಳ ವಿರುದ್ಧ ಕಿಡಿಗೇಡಿತನ, ಸಮಾಜದಲ್ಲಿ ಬಿರುಕು ಮೂಡಿಸುವುದು, ಅತಿಕ್ರಮ ಪ್ರವೇಶ ಹಾಗೂ ಬೆದರಿಕೆ ಆರೋಪಗಳನ್ನು ಮಾಡಲಾಗಿದೆ. ಆದರೆ, ದೂರು, ವಕೀಲರ ವಾದ ಮತ್ತು ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದಾಗ ಅಂತಹ ಆರೋಪಗಳಿಗೆ ಯಾವುದೇ ಪುರಾವೆಗಳು ಕಾಣುತ್ತಿಲ್ಲ. ಹೀಗಿದ್ದಾಗ, ಆರೋಪಿಗಳ ವಿರುದ್ಧದ ಪ್ರಕರಣ ಮುಂದುವರೆಸುವುದು ಕಾನೂನಿನ ದುರ್ಬಳಕೆ ಆಗಲಿದೆ ಎಂದು ಹೇಳಿತು. ಇದೇ ವೇಳೆ ಇಬ್ಬರು ಯುವಕರ ಅರ್ಜಿಯನ್ನು ಮಾನ್ಯ ಮಾಡಿ, ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿತು.

Recent Articles

spot_img

Related Stories

Share via
Copy link