31 ಪ್ರಿಡೇಟರ್ ಡ್ರೋನ್ ಖರೀದಿಗೆ ಅಮೆರಿಕದೊಂದಿಗೆ ಭಾರತ ಒಪ್ಪಂದ

ನವದೆಹಲಿ

    ಅಮೆರಿಕದ ಶಕ್ತಿಶಾಲಿ ಎಂಕ್ಯು-9ಬಿ ಪ್ರಿಡೇಟರ್ ಡ್ರೋನ್​ಗಳನ್ನು ಭಾರತ ಪಡೆಯಲಿದೆ. 31 ಪ್ರಿಡೇಟರ್ ಡ್ರೋನ್​ಗಳಿಗೆ ಭಾರತದ ಮಿಲಿಟರಿ ಆರ್ಡರ್ ನೀಡಿದೆ. ಭಾರತ ಮತ್ತು ಅಮೆರಿಕ ನಡುವೆ ಈ ಒಪ್ಪಂದ ಅಂತಿಮಗೊಂಡಿದೆ. ಅಮೆರಿಕದ ಜನರಲ್ ಅಟಾಮಿಕ್ಸ್ ಸಂಸ್ಥೆ ಈ ಮಾರಕ ಡ್ರೋನ್​ಗಳನ್ನು ತಯಾರಿಸಲಿದೆ. ಭಾರತದಲ್ಲಿ ಈ ಡ್ರೋನ್​ಗಳಿಗಾಗಿ ಎಂಆರ್​ಒ ಕೇಂದ್ರವನ್ನು ನಿರ್ಮಿಸಲಾಗುತ್ತದೆ. ಒಪ್ಪಂದದಲ್ಲಿ ಇದನ್ನೂ ಒಳಗೊಳ್ಳಲಾಗಿದೆ. ವರದಿ ಪ್ರಕಾರ, 3.5 ಬಿಲಿಯನ್ ಡಾಲರ್ ಅಥವಾ 32,000 ಕೋಟಿ ರೂ ಮೊತ್ತದ ಒಪ್ಪಂದವಾಗಿದೆ.

   ಜನರಲ್ ಅಟಾಮಿಕ್ಸ್ ಸಂಸ್ಥೆ ಎಂಕ್ಯೂ ‘ರೀಪರ್’ ಡ್ರೋನ್ ಬಹಳ ಶಕ್ತಿಶಾಲಿಯಾಗಿದೆ. ಭಾರತಕ್ಕೆ ಸಿಗಲಿರುವ ಎಂಕ್ಯೂ-9ಬಿ ಪ್ರಿಡೇಟರ್ ಡ್ರೋನ್ ಈ ರೀಪರ್ ಡ್ರೋನ್​ನ ವೇರಿಯೆಂಟ್ ಆಗಿದೆ. 2022ರ ಜುಲೈನಲ್ಲಿ ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ಅಲ್-ಖೈದಾ ನಾಯಕ ಆಯ್ಮನ್ ಅಲ್ ಜವಾಹಿರಿ ಎಂಬಾತನನ್ನು ಕೊಲ್ಲಲು ಈ ಡ್ರೋನ್ ಅನ್ನು ಬಳಸಲಾಗಿತ್ತು. ಈ ಡ್ರೋನ್​ನಲ್ಲಿ ಇದ್ದ ಹೆಲ್​ಫೈರ್ ಮಿಸೈಲ್​ನಿಂದ ಹೊಡೆದು ಜವಾಹಿರಿಯನ್ನು ಕೊಲ್ಲಲಾಗಿತ್ತು.
   ಎಂಕ್ಯೂ-9ಬಿ ಪ್ರಿಡೇಟರ್ ಡ್ರೋನ್​ಗಳಲ್ಲಿ ಎರಡು ವೇರಿಯೆಂಟ್​ಗಳಿಗೆ ಭಾರತ ಆರ್ಡರ್ ಕೊಟ್ಟಿದೆ. ಸೀಗಾರ್ಡಿಯನ್ ವೇರಿಯೆಂಟ್​ನ 15 ಪ್ರಿಡೇಟರ್ ಡ್ರೋನ್​ಗಳು ಭಾರತೀಯ ನೌಕಾಪಡೆಗೆ ನಿಯೋಜನೆಯಾಗಲಿವೆ. ಎಂಟೆಂಟು ಸ್ಕೈಗಾರ್ಡಿಯನ್ ಡ್ರೋನ್​ಗಳು ಭಾರತೀಯ ಸೇನೆ ಮತ್ತು ವಾಯುಪಡೆಗೆ ಹೋಗಲಿವೆ. 
   ಎಂಕ್ಯು-9ಬಿ ಪ್ರಿಡೇಟರ್ ಡ್ರೋನ್​ಗಳು ಬಹಳ ಎತ್ತರದಲ್ಲಿ, ಹೆಚ್ಚ ಅವಧಿ ಓಡಬಲ್ಲ ಶಕ್ತಿ ಹೊಂದಿರುತ್ತವೆ. 2,155 ಕಿಲೋ ಪೇಲೋಡ್ ಅಥವಾ ಬಾಹ್ಯವಸ್ತುಗಳ ತೂಕ ಹೊತ್ತು ಇದು 40,000 ಅಡಿ ಎತ್ತರದಲ್ಲಿ 40 ಗಂಟೆ ಕಾಲ ನಿರಂತರವಾಗಿ ಓಡಬಲ್ಲುದು. ಈ ಡ್ರೋನ್​ನಲ್ಲಿ ನಾಲ್ಕು ಹೆಲ್​ಫೈರ್ ಕ್ಷಿಪಣಿಗಳು ಮತ್ತು 450 ಕಿಲೋ ಬಾಂಬ್​ಗಳನ್ನು ಇರಿಸಬಹುದು.

Recent Articles

spot_img

Related Stories

Share via
Copy link