ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್…!

ನವದೆಹಲಿ

   ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್ ಎಂಬಂತೆ ತುಟ್ಟಿಭತ್ಯೆ ಹೆಚ್ಚಳವಾಗುತ್ತಿದೆ. ಡಿಎ ಮತ್ತು ಡಿಆರ್ ಅನ್ನು ಶೇ 3ರಷ್ಟು ಹೆಚ್ಚಿಸಲು ಕೇಂದ್ರ ಸಂಪುಟ ಇಂದು ಬುಧವಾರ ಅನುಮೋದನೆ ನೀಡಿದೆ. ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಅಶ್ವಿನಿ ವೈಷ್ಣವ್ ಇಂದು ಸಂಜೆ ಅಧಿಕೃತವಾಗಿ ಘೋಷಿಸುವ ನಿರೀಕ್ಷೆ ಇದೆ. ಸರ್ಕಾರದ ಈ ಕ್ರಮವು ಲಕ್ಷಾಂತರ ಕೇಂದ್ರ ಸರ್ಕಾರೀ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಲಾಭವಾಗಲಿದೆ. 

   ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರವನ್ನು (ಡಿಆರ್) ಸರ್ಕಾರ ವರ್ಷಕ್ಕೆ ಎರಡು ಬಾರಿ ಹೆಚ್ಚಿಸುತ್ತದೆ. ಜನವರಿ ಮತ್ತು ಜುಲೈನಲ್ಲಿ ಹೆಚ್ಚಳವಾಗುತ್ತದೆ. ಬೆಲೆ ಏರಿಕೆಯ ಬಿಸಿ ತಾಕದಿರಲಿ ಎಂಬ ಕಾರಣಕ್ಕೆ ಸಂಬಳಕ್ಕೆ ಮತ್ತು ಪಿಂಚಣಿಗೆ ಹೆಚ್ಚುವರಿಯಾಗಿ ಡಿಯರ್ನೆಸ್ ಅಲೋಯನ್ಸ್ ಮತ್ತು ಡಿಯರ್ನೆಸ್ ರಿಲೀಫ್ ಅನ್ನು ನೀಡಲಾಗುತ್ತದೆ. ಹಣದುಬ್ಬರ ದರಕ್ಕೆ ಅನುಗುಣವಾಗಿ ಈ ಏರಿಕೆ ಇರುತ್ತದೆ. ಈಗ ಮಾಡಲಿರುವ ಡಿಎ ಮತ್ತು ಡಿಆರ್ ಹೆಚ್ಚಳವು ಜುಲೈ 1ರಿಂದಲೇ ಅನ್ವಯ ಆಗುತ್ತದೆ. 

   ಸದ್ಯ ಡಿಎ ಅಥವಾ ತುಟ್ಟಿಭತ್ಯೆಯು ಮೂಲವೇತನದ ಶೇ. 50ರಷ್ಟಿದೆ. ಈಗ ಹೆಚ್ಚಳವಾದರೆ ಡಿಎ ಶೇ. 53ಕ್ಕೆ ಏರಲಿದೆ. ಒಬ್ಬ ಸರ್ಕಾರಿ ಉದ್ಯೋಗಿಯ ಪೂರ್ಣ ಮಾಸಿಕ ವೇತನದಲ್ಲಿ ಬೇಸಿಕೆ ಪೇ ಅಥವಾ ಮೂಲವೇತನವು 30,000 ರೂ ಇದ್ದಲ್ಲಿ ಈಗ 15,000 ರೂನಷ್ಟು ಡಿಎ ಅನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಈಗ ಶೇ. 3ರಷ್ಟು ಡಿಎ ಹೆಚ್ಚಳವಾದರೆ 900 ರೂ ಸೇರ್ಪಡೆಯಾಗುತ್ತದೆ. ಅಂದರೆ 15,900 ರೂನಷ್ಟು ಡಿಎ ಆಗುತ್ತದೆ.

   ಈಗ್ಗೆ ಕೆಲವಾರ ವರ್ಷಗಳಿಂದಲೂ ಸರ್ಕಾರ ವರ್ಷಕ್ಕೆ ಎರಡು ಬಾರಿ ಶೇ. 4ರಷ್ಟು ಡಿಎ ಮತ್ತು ಡಿಆರ್ ಹೆಚ್ಚಳ ಮಾಡುತ್ತಾ ಬಂದಿದೆ. ಈ ಬಾರಿ ಶೇ. 3ರಷ್ಟು ಮಾತ್ರವೇ ಏರಿಕೆ ಆಗಲಿದೆ. ಜೂನ್ ಅಂತ್ಯಕ್ಕೆ ಮುಂಚಿನ 12 ತಿಂಗಳ ಸರಾಸರಿ ಹಣದುಬ್ಬರ ದರದ ಆಧಾರದ ಮೇಲೆ ಡಿಎ ಮತ್ತು ಡಿಆರ್ ಏರಿಕೆಯನ್ನು ನಿರ್ಧರಿಸಲಾಗಿದೆ.

   ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳು ಹಬ್ಬರ ಸೀಸನ್ ಆದ್ದರಿಂದ, ಸೆಪ್ಟೆಂಬರ್​ನಲ್ಲೇ ಉದ್ಯೋಗಿಗಳು ಡಿಎ ಹೆಚ್ಚಳ ನಿರೀಕ್ಷಿಸಿದ್ದರು. ಸಾಮಾನ್ಯವಾಗಿ ಜನವರಿಯ ಡಿಎ ಹೆಚ್ಚಳವನ್ನು ಮಾರ್ಚ್​ನಲ್ಲೂ, ಜುಲೈನ ಹೆಚ್ಚಳವನ್ನು ಸೆಪ್ಟೆಂಬರ್​ನಲ್ಲೂ ಘೋಷಿಸಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ ಮುಗಿದರೂ ಸರ್ಕಾರದ ವತಿಯಿಂದ ಹೆಚ್ಚಳದ ಘೋಷಣೆ ಬಂದಿರಲಿಲ್ಲ. ಇದರಿಂದ ಬಹಳಷ್ಟು ಸರ್ಕಾರಿ ಉದ್ಯೋಗಿಗಳು ವ್ಯಾಕುಲಗೊಂಡಿದ್ದರು. ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ಕಾರ್ಮಿಕರ ಮಹಾ ಒಕ್ಕೂಟವು ಈ ಸಂಬಂಧ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದು ಡಿಎ ಹೆಚ್ಚಳಕ್ಕೆ ಆಗ್ರಹಿಸಿತ್ತು.

Recent Articles

spot_img

Related Stories

Share via
Copy link