ನೆಟ್ಟಾರು ಹತ್ಯೆ ಕೇಸ್‌ : ಪ್ರಮುಖ ಆರೋಪಿ ಬಂಧನ

ಬೆಂಗಳೂರು

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡು, ವಿದೇಶಕ್ಕೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಬಂಧನಕ್ಕೊಳಪಡಿಸಿದೆ.

   ರಿಯಾಜ್ ಯೂಸಫ್ ಹಾರಳ್ಳಿ ಅಲಿಯಾಸ್ ರಿಯಾಜ್ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ. ಈತನ ಬಂಧನದೊಂದಿಗೆ ಇದೂವರೆಗೂ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

    ಆರೋಪಿ ಮುಂಬೈ ವಿಮಾನ ನಿಲ್ದಾಣದ ಮೂಲಕ ಪರಾರಿಯಾಗುವ ಯತ್ನದಲ್ಲಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಅಲ್ಲೇ ವಶಪಡಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ವಿದೇಶದಲ್ಲೇ ಇದ್ದ ರಿಯಾಜ್, ನಾಪತ್ತೆಯಾಗಿರುವ ಅಬ್ದುಲ್ ರೆಹಮಾನ್ ಸೂಚನೆ ಪ್ರಕಾರ ಭಾರತಕ್ಕೆ ಮರಳಿದ್ದ. ಇತ್ತೀಚೆಗೆ ಬಂಧಿತನಾಗಿದ್ದ ಮುಸ್ತಫಾ ಪೈಚಾರ್ ಎಂಬ ಆರೋಪಿಗೆ ಸಕಲೇಶಪುರದಲ್ಲಿ ವಾಸ್ತವ್ಯ ಹೂಡಲು ಸಹಕರಿಸಿದ್ದ ಎನ್ನಲಾಗಿದೆ.

    ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಮಾಜಿ ಕಾರ್ಯದರ್ಶಿ ಮತ್ತು ಸೇವಾ ತಂಡದ ಮುಖ್ಯಸ್ಥ ಪೈಚಾರ್ ಪ್ರಕರಣದ ಮುಖ್ಯ ಸಂಚುಕೋರನಾಗಿದ್ದ. ಈತ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿ, ಆರೋಪಿಗಳ ತಂಡವನ್ನು ಒಟ್ಟುಗೂಡಿ, ಅಪರಾಧದ ಬಳಿಕ ಇತರರೊಂದಿಗೆ ಪರಾರಿಯಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

   ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ಅವರು 2002ರ ಜುಲೈ 26 ರಂದು ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.

    ತಕ್ಷಣ ಪುತ್ತೂರು ಆಸ್ಪತ್ರೆಗೆ ಪ್ರವೀಣ್‌ ಅವರನ್ನು ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದ ಕಾರಣ ಚಿಕಿತ್ಸೆ ಫಲಕರಿಯಾಗದೇ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಈವರೆಗೆ ಹಲವಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

     ಆರಂಭದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಕಳೆದ ವರ್ಷ ಜನವರಿಯಲ್ಲಿ ಎನ್‌ಐಎ 21 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಎನ್‌ಐಎ ಚಾರ್ಜ್‌ಶೀಟ್‌ನ ಪ್ರಕಾರ, ಒಂದು ಸಮುದಾಯದ ಸದಸ್ಯರಲ್ಲಿ ಭಯವನ್ನು ಸೃಷ್ಟಿಸಲು ಮತ್ತು ಸಮಾಜದಲ್ಲಿ ಕೋಮು ದ್ವೇಷ, ಅಶಾಂತಿಯನ್ನು ಸೃಷ್ಟಿಸಲು ಪಿಎಫ್‌ಐನ ಕಾರ್ಯಸೂಚಿಯ ಭಾಗವಾಗಿ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿತ್ತು.

      ಸೆಪ್ಟೆಂಬರ್ 2022 ರಲ್ಲಿ, ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ಐದು ವರ್ಷಗಳ ನಿಷೇಧ ಹೇರಿತ್ತು. ಪಿಎಫ್‌ಐ ಮತ್ತು ಅದರ ಎಲ್ಲ ಅಂಗಸಂಸ್ಥೆಗಳು, ಸಹವರ್ತಿಗಳು ಹಾಗೂ ರಂಗಗಳನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA) ಅಡಿ ನಿಷೇಧ ಹೊರಡಿಸಿತ್ತು. ಇದರೊಂದಿಗೆ ಯುಎಪಿಎ ಸೆಕ್ಷನ್ 35ರ ಅಡಿ ನಿಷೇಧಕ್ಕೆ ಒಳಗಾದ 42 ಭಯೋತ್ಪಾದನಾ ಸಂಘಟನೆಗಳ ಪಟ್ಟಿಗೆ ಪಿಎಫ್‌ಐ ಸೇರ್ಪಡೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap