ಸಿನಿರಂಗಕ್ಕೆ ಪವನ್‌ ಕಲ್ಯಾಣ್‌ ಪುತ್ರನ ಶೀಘ್ರ ಎಂಟ್ರಿ …..!

ಹೈದರಾಬಾದ್‌: 

    ಟಾಲಿವುಡ್‌ನ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌  ಸದ್ಯ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿ ವಿವಿಧ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೀಗಾಗಿ ಅವರ ಚಿತ್ರಗಳನ್ನು ಅಭಿಮಾನಿಗಳು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಅವರ ಮುಂದಿನ ಚಿತ್ರಕ್ಕಾಗಿ ಕಾದು ಕೂರುವಂತಾಗಿದೆ. ಈ ಮಧ್ಯೆ ಪವನ್‌ ಕಲ್ಯಾಣ್‌ ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದು ಹರಿದಾಡುತ್ತಿದೆ. ಹೌದು, ಪವನ್‌ ಕಲ್ಯಾಣ್‌ ಅವರ ಪುತ್ರ ಅಕಿರ ನಂದನ್‌  ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಯಾವ ಚಿತ್ರ? ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ.

   ಅಕಿರ ನಂದನ್‌ ಇದುವರೆಗೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳದಿದ್ದರೂ ಆಂಧ್ರ ಪ್ರದೇಶದಲ್ಲಿ ಚಿರ ಪರಿಚಿತವಾಗಿದ್ದಾರೆ. ತಮ್ಮ ತಂದೆ ಪವನ್‌ ಕಲ್ಯಾಣ್‌ ಜತೆ ಆಗಾಗ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿದ್ದಾರೆ. ಚುನಾವಣೆ ವೇಳೆ ಪವನ್‌ ಕಲ್ಯಾಣ್‌ ಅವರ ರಾಜಕೀಯ ಪ್ರಚಾರದಲ್ಲಿ ಅಕಿರ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಆಗಾಗ ವೇದಿಕೆ ಮೇಲೆ ತಂದೆ ಜತೆ ಪ್ರತ್ಯಕ್ಷರಾಗುತ್ತಿರುತ್ತಾರೆ. ಹೀಗಾಗಿ ಅಭಿಮಾನಿಗಳು ಅವರನ್ನು ಸಿನಿಮಾದಲ್ಲಿ ನೋಡುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಬಹು ದಿನಗಳ ಈ ಬೇಡಿಕೆ ಈಡೇರುವ ಸಾಧ್ಯತೆ ಇದೆ ಎನ್ನಲಾಗಿದೆ.

   ತೆಲುಗು ಚಿತ್ರದ ಮೂಲಕ ಅಕಿರ ಬಣ್ಣದ ಲೋಕಕ್ಕೆ ಕಾಲಿಡಲಿದ್ದಾರೆ. ಪವನ್‌ ಕಲ್ಯಾಣ್‌ ಅವರ ಮುಂಬರುವ ʼಒಜಿʼ (OG) ಸಿನಿಮಾದ ಮೂಲಕ ಅಕಿರ ನಂದನ್‌ ಅವರನ್ನು ಪರಿಚಯಿಸಲು ಚಿತ್ರತಂಡ ಸಿದ್ದತೆ ನಡೆಸಿದೆ. ಸುಜೀತ್‌ ನಿರ್ದೇಶನದ ಈ ಚಿತ್ರದಲ್ಲಿ ಅಕಿರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬೆಲ್ಲ ಸುದ್ದಿ ಹರಿದಾಡುತ್ತಿದೆ. ಆ್ಯಕ್ಷನ್‌, ಥ್ರಿಲ್ಲರ್‌ನ ʼಒಜಿʼಯಲ್ಲಿ ಪವನ್‌ ಕಲ್ಯಾಣ್‌ ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಥೆಗೆ ಬಹುಮುಖ್ಯ ತಿರುವು ಕೊಡುವ ಒಂದು ಚಿಕ್ಕ ಪಾತ್ರದಲ್ಲಿ ಅಕಿರ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ. ಆ ಮೂಲಕ ಅದ್ಧೂರಿಯಾಗಿ ಲಾಂಚ್‌ ಮಾಡಲು ಸಿದ್ಧತೆ ನಡೆಯುತ್ತಿದೆ.

   ಸದ್ಯ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೆ ಈಗಾಗಲೇ ತಂದೆ-ಮಗನ ಜೋಡಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೇ ಕಾರಣಕ್ಕೆ ʼಒಜಿʼ ಬಗ್ಗೆ ನಿರೀಕ್ಷೆ ಗರಿಗೆದರಿದೆ. 

   ಒಜಸ್‌ ಗಂಭೀರ್‌ ಆಲಿಯಾಸ್‌ ಒಜಿ ಎನ್ನುವ ಡಾನ್‌ ಪಾತ್ರವನ್ನು ಪವನ್‌ ಕಲ್ಯಾಣ್‌ ನಿರ್ವಹಿಸುತ್ತಿದ್ದಾರೆ. 10 ವರ್ಷ ಬಳಿಕ ಮುಂಬೈಯಲ್ಲಿರುವ ತನ್ನ ಶತ್ರುವನ್ನು ಹತ್ಯೆ ಮಾಡಲು ಆಗಮಿಸುವ ಒಜಿಯ ಕಥೆಯನ್ನು ಅತ್ಯಂತ ರೋಚಕವಾಗಿ ಕಟ್ಟಿ ಕೊಡಲಾಗುತ್ತಿದೆ. ಭರಪೂರ ಆ್ಯಕ್ಷನ್‌ ದೃಶ್ಯಗಳು ಚಿತ್ರದಲ್ಲಿರಲಿದೆ. ಜತೆಗೆ ಫ್ಯಾಮಿಲಿ ಸೆಂಟಿಮೆಂಟಿಗೂ ಒತ್ತು ನೀಡಲಾಗುತ್ತಿದೆ ಎನ್ನಲಾಗಿದೆ.

   ಈ ಚಿತ್ರದಲ್ಲಿ ವಿಲನ್‌ ಆಗಿ ಬಾಲಿವುಡ್‌ನ ಇಮ್ರಾನ್‌ ಹಷ್ಮಿ ನಡಿಸುತ್ತಿದ್ದು, ನಾಯಕಿಯಾಗಿ ಕರ್ನಾಟಕ ಮೂಲದ ಪ್ರಿಯಾಂಕ ಮೋಹನ್‌ ಅಭಿನಯಿಸುತ್ತಿದ್ದಾರೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಪವನ್‌ ಕಲ್ಯಾಣ್‌-ಪ್ರಿಯಾಂಕಾ ಮೋಹನ್‌ ಮತ್ತು ಇಮ್ರಾನ್‌ ಹಷ್ಮಿ ಜತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.