ಬೆಂಗಳೂರು:
ಮೊನ್ನೆಯ ಘೋರ ಮಳೆಯ ಕಾರಣ ಬೆಂಗಳೂರಿನ ಹೆಣ್ಣೂರಿನಲ್ಲಿ ಕುಸಿದ ಕಟ್ಟಡದಡಿ ಸಿಲುಕಿ ಮೃತಪಟ್ಟ ಕಾರ್ಮಿಕರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಹೆಣ್ಣೂರಿನ ಬಾಬುಸಾಪಾಳ್ಯದಲ್ಲಿ ಮೊನ್ನೆ ನಿರ್ಮಾಣ ಹಂತದ ಕಟ್ಟಡ ಕುಸಿದು 8 ಜನ ಕಾರ್ಮಿಕರು ಮೃತಪಟ್ಟಿದ್ದರು. ಇಂದು ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬಳಿಕ, ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ದುರಂತದಲ್ಲಿ 8 ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. 8 ಜನರನ್ನು ರಕ್ಷಣೆ ಮಾಡಲಾಗಿದೆ. ಆರು ಜನ ಗಾಯಗೊಂಡಿದ್ದು ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡುತ್ತೇವೆ. ಅಲ್ಲದೇ ಘಟನೆಯಲ್ಲಿ ಗಾಯಗೊಂಡವರಿಗೆ ಸರ್ಕಾರದಿಂದ ವೈದ್ಯಕೀಯ ವೆಚ್ಚ ಭರಿಸಲಾಗುತ್ತದೆ. ಕಳಪೆ ಕಾಮಗಾರಿಯಿಂದ ಕಟ್ಟಡ ಬಿದ್ದಿದೆ. ಮುಂದೆ ಈ ರೀತಿಯ ಘಟನೆ ಆಗದಂತೆ ಸೂಕ್ತವಾದ ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕಾರಿಗಳಿಗೆ ನೋಟಿಸ್ ಕೊಡುವುದಕ್ಕೆ ಸೂಚನೆ ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಸಚಿವ ಭೈರತಿ ಬಸವರಾಜ್ ಕೂಡ ಇದ್ದರು. ಇದುವರೆಗೂ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಸೇರಿ ಕಟ್ಟಡದ ಅವಶೇಷಗಳ ಅಡಿ ಸಿಲುಕಿದ ಎಂಟು ಜನ ಕಾರ್ಮಿಕರ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಇನ್ನೂ ಇಬ್ಬರು ಅವಶೇಷಗಳ ಅಡಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಪರಿಹಾರ ನೀಡುತ್ತೇವೆ. ಗಾಯಾಳುಗಳಿಗೆ ಸರ್ಕಾರದಿಂದ ವೈದ್ಯಕೀಯ ವೆಚ್ಚ ಭರಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
