ಮತ್ತೊಮ್ಮೆ ಬದಲಾಯ್ತು ʼಪುಷ್ಪ 2ʼ ಬಿಡುಗಡೆ ದಿನಾಂಕ…..!

ಹೈದರಾಬಾದ್‌: 

   ಅಲ್ಲು ಅರ್ಜುನ್‌ ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ 2ʼ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತವರಿಗೆ ಗುಡ್‌ನ್ಯೂಸ್‌ ಹೊರ ಬಿದ್ದಿದೆ. ನಿಗದಿಗಿಂದ ಮೊದಲೇ ಪುಷ್ಪರಾಜ್‌ನ ದರ್ಶನವಾಗಲಿದೆ. ಹೌದು, ಟಾಲಿವುಡ್‌ನ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ʼಪುಷ್ಪ 2ʼ ಬಿಡುಗಡೆ ದಿನಾಂಕ ಮತ್ತೊಮ್ಮೆ ಬದಲಾಗಿದೆ. ಈ ಬಗ್ಗೆ ಸ್ವತಃ ಚಿತ್ರತಂಡವೇ ಮಾಹಿತಿ ಹಂಚಿಕೊಂಡಿದೆ.

   ಸುಕುಮಾರ್ ಆ್ಯಕ್ಷನ್‌ ಕಟ್‌ ಹೇಳಿರುವ ʼಪುಷ್ಪ: ದಿ ರೂಲ್‌ʼ ಸಿನಿಮಾ ನಿಗದಿಗಿಂತ 1 ದಿನ ಮೊದಲೇ ತೆರೆ ಕಾಣಲಿದೆ. ಅಂದರೆ ಡಿಸೆಂಬರ್‌ 5ರಂದು ಥಿಯೇಟರ್‌ಗೆ ಲಗ್ಗೆ ಇಡಲಿದೆ. ಈ ಹಿಂದೆ ಡಿಸೆಂಬರ್‌ 6ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಯಾರಕರು ಘೋಷಿಸಿದ್ದರು. ಆದರೆ ಇದೀಗ ಧಿಡೀರ್‌ ಆಗಿ ರಿಲೀಸ್‌ ದಿನಾಂಕವನ್ನು ಬದಲಾಯಿಸಲಾಗಿದೆ. 

   ʼಪುಷ್ಪ 2ʼ ನಿರ್ಮಾಪಕರಾದ ನವೀನ್‌ ಯೆರ್ನೇನಿ ಮತ್ತು ಯಲಮಂಚಿ ರವಿ ಶಂಕರ್‌ ಅವರು ಚಿತ್ರ ವಿತರಕರೊಂದಿಗೆ ನಡೆಸಿದ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಲಾಂಗ್‌ ವೀಕೆಂಡ್‌ ಆದ ಕಾರಣ ಅಮೆರಿಕದಲ್ಲಿ ಡಿಸೆಂಬರ್‌ 4ರಂದು ಸಿನಿಮಾ ತೆರೆ ಕಾಣಲಿದೆ. ಹೀಗಾಗಿ ಒಂದು ದಿನದ ಬಳಿಕ ಅಂದರೆ ಡಿಸೆಂಬರ್‌ 5ರಂದು ಭಾರತದಲ್ಲಿಯೂ ಬಿಡುಗಡೆಯಾಗಲಿದೆ. ಅಲ್ಲದೆ ಡಿಸೆಂಬರ್ 6 ಶುಕ್ರವಾರ. ಅದರ ಬದಲು ಒಂದು ದಿನ ಮೊದಲು ಅಂದರೆ ಗುರುವಾರ ಚಿತ್ರ ರಿಲೀಸ್ ಮಾಡಿದರೆ ಲಾಭ ಜಾಸ್ತಿ ಎನ್ನುವ ಲೆಕ್ಕಾಚಾರವೂ ಈ ನಿರ್ಧಾರದ ಹಿಂದಿದೆ. ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಹೀಗೆ ಸುದೀರ್ಘ 4 ದಿನಗಳ ಕಾಲ ಪ್ರೇಕ್ಷಕರನ್ನು ಥಿಯೇಟರ್‌ನತ್ತ ಸೆಳೆಯಬಹುದು ಎಂದು ಚಿತ್ರತಂಡ ಯೋಜನೆ ರೂಪಿಸಿದೆ. ಈಗಾಗಲೇ ಸಿನಿಮಾದ ಮೇಲಿನ ನಿರೀಕ್ಷೆ ಬೆಟ್ಟದಷ್ಟಿರುವುದರಿಂದ ಮೊದಲ ದಿನದಿಂದಲೇ ಅಭಿಮಾನಿಗಳು ಥಿಯೇಟರ್‌ನತ್ತ ಹರಿದು ಬರಲಿದ್ದಾರೆ ಎಂದು ಅಂದಾಜಿಸಲಾಗಿದೆ. 

   ʼಪುಷ್ಪ 2ʼ ಚಿತ್ರ ಬಿಡುಗಡೆ ದಿನಾಂಕ ಬದಲಾಗುತ್ತಿರುವುದು ಇದು ಮೊದಲ ಸಲವೇನಲ್ಲ. ಚಿತ್ರತಂಡ ಆರಂಭದಲ್ಲಿ ಆಗಸ್ಟ್‌ 15ರಂದು ರಿಲೀಸ್‌ ಮಾಡುವುದಾಗಿ ಘೋಷಿಸಿತ್ತು. ಆದರೆ ಸಿನಿಮಾ ಕೆಲಸಗಳು ಸಂಪೂರ್ಣವಾಗಿ ಮುಗಿಯದ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಡಿಸೆಂಬರ್‌ 6ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೆ ದಿನಾಂಕ ಬದಲಾಗಿದ್ದು, ಮೊದಲೇ ರಿಲೀಸ್‌ ಆಗುತ್ತಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. 

   ವಿಶೇಷ ಎಂದರೆ ʼಪುಷ್ಪ 2ʼ ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣ ಅಭಿನಯದ ಹಿಂದಿ ಚಿತ್ರ ʼಛಾವಾʼ ಡಿಸೆಂಬರ್‌ 6ರಂದೇ ತೆರೆ ಕಾಣಲಿದೆ. ಮೊದಲ ಬಾರಿ ವಿಕ್ಕಿ ಕೌಶಲ್‌ ಮತ್ತು ರಶ್ಮಿಕಾ ಜತೆಯಾಗಿ ನಟಿಸುತ್ತಿರುವುದಿಂದ ಈ ಚಿತ್ರವೂ ಗಮನ ಸೆಳೆದಿದೆ. ಹೀಗಾಗಿ ಬಾಕ್ಸ್‌ ಆಫೀಸ್‌ನಲ್ಲಿ ʼಪುಷ್ಪ 2ʼ ಮತ್ತು ʼಛಾವಾʼ ಕ್ಲ್ಯಾಶ್‌ ಆಗುವುದರಲ್ಲಿತ್ತು. ರಶ್ಮಿಕಾ V/S ರಶ್ಮಿಕಾ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಅವರ ಅಭಿಮಾನಿಗಳು ಬೆಸರ ವ್ಯಕ್ತಪಡಿಸಿದ್ದರು. ಇದೀಗ ಈ ಆತಂಕ ನಿವಾರಣೆಯಾಗಿದೆ. ʼಪುಷ್ಪ 2ʼ ಸಿನಿಮಾದಲ್ಲಿ ಫಹದ್ ಫಾಸಿಲ್, ಡಾಲಿ ಧನಂಜಯ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 

Recent Articles

spot_img

Related Stories

Share via
Copy link
Powered by Social Snap