ಹುಳಿಯಾರು
ಲೋಕಸಭಾ ಚುನಾವಣೆಯ ಅಂಗವಾಗಿ ಹುಳಿಯಾರು ಪಪಂ ಸಿಬ್ಬಂಧಿಗಳನ್ನು ವಿವಿಧ ಕೆಲಸಗಳಿಗೆ ನಿಯೋಜಿಸಿದ್ದು ಚುನಾವಣಾ ಕರ್ತವ್ಯಕ್ಕೆ ತೆರಳಿದ ಸಿಬ್ಬಂಧಿ ಬೀದಿ ದೀಪ ಆರಿಸದೆ ತೆರಳಿದ ಪರಿಣಾಮ ಮಧ್ಯಾಹ್ನ 12 ಗಂಟೆಯಾದರೂ ಬೀದಿ ದೀಪಗಳು ಉರಿಯುತ್ತಿದ್ದವು.
ಹುಳಿಯಾರಿನ ಬಹುತೇಕ ಬೀದಿಗಳಲ್ಲಿ ಬೀದಿ ದೀಪಗಳನ್ನು ಆರಿಸಲಾಗಿದ್ದು ಇಲ್ಲಿನ ಉರ್ದು ಸ್ಕೂಲ್ ರಸ್ತೆಯ ಬೀದಿ ದೀಪಗಳನ್ನು ಮಾತ್ರ ಆರಿಸದೆ ಮರೆತಿರುವ ಕಾರಣ ಹಗಲಲ್ಲೂ ಝಗಮಗಿಸುತ್ತಿತ್ತು. ವಿದ್ಯುತ್ ಅಭಾವ ರಾಜ್ಯದೆಲ್ಲೆಡೆ ಇದೆ. ವಿದ್ಯುತ್ ಉಳಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಚುನಾವಣೆ ನೆಪದಲ್ಲಿ ಬಿದಿ ದೀಪ ಆರಿಸದೆ ನಿರ್ಲಕ್ಷ್ಯಿಸಿದ್ದು ಮತದಾನ ಮಾಡಲು ಬಂದಿದ್ದ ಮತದಾರರ ಟೀಕೆಗೆ ಗುರಿಯಾಗಿತ್ತು.
ಹುಳಿಯಾರು ಪಪಂ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆಯ ಬಗ್ಗೆ ಆಗಾಗಾ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಪರಿಣಾಮ ಹಗಲಲ್ಲೂ ಬೀದಿ ದೀಪ ಉರಿಯುವ ಪ್ರಕರಣಗಳು ಆಗಾಗ ಪುನಾರಾವರ್ತನೆಯಾಗುತ್ತಿವೆ. ಹೀಗಾಗಿ ಬೆಸ್ಕಾಂಗೆ ಪಪಂನಿಂದ ಕಟ್ಟಬೇಕಿರುವ ವಿದ್ಯುತ್ ಬಿಲ್ ಹೆಚ್ಚಾಗುತ್ತಿದೆ.
ಇನ್ನಾದರೂ ಪಪಂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಬ್ಬಂಧಿಗಳಿಗೆ ವಿದ್ಯುತ್ ಉಳಿತಾಯದ ಅಗತ್ಯತೆಯ ಬಗ್ಗೆ ಅರಿವು ಮೂಡಿಸಿ ಬೆಳಗಾದ ತಕ್ಷಣ ಊರಿನ ಎಲ್ಲಾ ಬೀದಿ ದೀಪಗಳು ಆಫ್ ಆಗುವಂತೆ ಮಾಡಬೇಕಿದೆ.