ತಿರುಪತಿ
ಆಂಧ್ರಪ್ರದೇಶದ ತಿರುಪತಿಯ ಹೋಟೆಲ್ಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದ ಬೆನ್ನಲ್ಲೇ ಇದೀಗ ಜಿಲ್ಲೆಯ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ದೇಗುಲದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರ ಪ್ರಕಾರ, ಇಸ್ಕಾನ್ ದೇವಾಲಯದ ಸಿಬ್ಬಂದಿಗೆ ಅಕ್ಟೋಬರ್ 27 ರಂದು ಬೆದರಿಕೆ ಸಂದೇಶ ಬಂದಿದೆ.
ಪಾಕಿಸ್ತಾನದ ಐಎಸ್ಐ ಜತೆ ನಂಟು ಹೊಂದಿರುವ ಭಯೋತ್ಪಾದಕರು ದೇವಾಲಯವನ್ನು ಸ್ಫೋಟಿಸಲಿದ್ದಾರೆ ಎಂದು ದೇಗುಲದ ಸಿಬ್ಬಂದಿಗೆ ಇ-ಮೇಲ್ ಸಂದೇಶ ಬಂದಿದೆ.ಬೆದರಿಕೆ ಇ-ಮೇಲ್ ಬಂದ ಬೆನ್ನಲ್ಲೇ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ತಂಡಗಳು ಸ್ಥಳಕ್ಕೆ ತಲುಪಿದ್ದು, ದೇವಾಲಯದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿವೆ. ಆದರೆ, ದೇವಸ್ಥಾನದ ಆವರಣದಲ್ಲಿ ಸ್ಫೋಟಕ ಅಥವಾ ಇತರ ಯಾವುದೇ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿಲ್ಲ. ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಕ್ಟೋಬರ್ 26 ರಂದು, ಆಗಂತುಕರು ತಿರುಪತಿಯ ಹೋಟೆಲ್ಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದರು. ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಕಳುಹಿಸಿದ್ದರು. ಇದರಿಂದ ಎಚ್ಚೆತ್ತ ಪೊಲೀಸರು ನಗರದ ಪ್ರತಿ ಹೋಟೆಲ್ಗಳಲ್ಲಿ ತಪಾಸಣೆ ನಡೆಸಿದ್ದರು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ಸಂಪೂರ್ಣ ಶೋಧದ ನಂತರ ಪೋಲಿಸರು ಹುಸಿ ಬಾಂಬ್ ಕರೆ ಎಂದು ದೃಢಪಡಿಸಿದ್ದರು.
ತಿರುಪತಿ ವಿಮಾನ ನಿಲ್ದಾಣಕ್ಕೆ ಕೂಡ ಭಾನುವಾರ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಬಂದಿತ್ತು. ಬೆದರಿಕೆ ಇ-ಮೇಲ್ ಕುರಿತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಇಮೇಲ್ ಆಧರಿಸಿ ಅಧಿಕಾರಿಗಳು ಆರೋಪಿಗಳ ಪತ್ತೆಗೆ ತಂಡಗಳನ್ನು ರಚಿಸಿದ್ದಾರೆ.ತಿರುಪತಿಯಲ್ಲಿ ಸತತ ಬಾಂಬ್ ಬೆದರಿಕೆ ಸಂದೇಶಗಳಿಂದ ಭಕ್ತರು ಭಯಭೀತರಾಗಿದ್ದಾರೆ. ಇದರಿಂದ ಬೆದರಿಕೆ ಹಾಕುತ್ತಿದ್ದವರ ಪತ್ತೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.