ಬೆಂಗಳೂರು:
ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಜಾರಿಯಲ್ಲಿರುವ ಶಕ್ತಿ ಯೋಜನೆಯನ್ನು ಮರುಪರಿಶೀಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆ ವಿರುದ್ಧ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, “ಶಕ್ತಿ ಯೋಜನೆ ಅವಶ್ಯಕತೆಯಿಲ್ಲ ಎಂದು ಅನೇಕ ಮಹಿಳೆಯರು ತಮಗೆ ತಿಳಿಸಿದ್ದಾರೆಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಅವರೆಲ್ಲರೂ ಡಿಕೆಶಿಯವರ ಕನಸಿನಲ್ಲಿ ಬಂದು ಹೇಳಿದ್ದಾರಾ’’ ಎಂದು ಅವರು ವ್ಯಂಗ್ಯವಾಡಿದ್ದಾರೆ. ಶಕ್ತಿ ಯೋಜನೆ ಮೂಲಕ ಅವರನ್ನು ಬಲಾಢ್ಯರನ್ನಾಗಿ ಮಾಡಿದ್ದೀರಾ? ಸರ್ಕಾರಕ್ಕೆ ಈ ಯೋಜನೆಯನ್ನು ದೀರ್ಘಾವಧಿಗೆ ಮಾಡಲು ಸಾಧ್ಯ ಆಗುತ್ತಿಲ್ಲ. ಒಂದೊಂದಾಗಿ ಗ್ಯಾರಂಟಿಗಳನ್ನು ರದ್ದುಗೊಳಿಸಲು ಮೊದಲ ಹಂತದ ಪ್ರಕ್ರಿಯೆ ಇದು. ಇದು ಗ್ಯಾರಂಟಿ ನಿಲ್ಲಿಸಲು ಒಂದು ಪೀಠಿಕೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈವರೆಗೆ ಗ್ಯಾರಂಟಿ ಯೋಜನೆಗಳನ್ನೇ ಪ್ರಮುಖವಾಗಿ ಹೇಳುತ್ತಿದ್ದರು. ನುಡಿದಂತೆ ನಡೆದಿದ್ದೇವೆ ಎಂದು ಜನರ ಬ್ರೈನ್ ವಾಷ್ ಮಾಡುತ್ತಿದ್ದರು. ಇದರಿಂದ ಅಭಿವೃದ್ಧಿ ಕೆಲಸ ನಿಲ್ಲಿಸಿದ್ದರು, ಎಲ್ಲಾ ಸ್ಥಗಿತಗೊಳಿಸಿದ್ದರು. ತೆರಿಗೆಯವರಿಗೆ 10 ಸಾವಿರ ಕೋಟಿ ಹೆಚ್ಚಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಇದು ಯಾವ ಪುರುಷಾರ್ಥಕ್ಕೆ? ಗ್ಯಾರಂಟಿ ಹೆಸರು ಹೇಳಿಕೊಂಡು ಜನರಿಗೆ ಹೊರೆ ಮಾಡಿ, ಜನರ ಹಣ ಕಿತ್ತು ಕಾರ್ಯಕ್ರಮ ಮುಂದುವರಿಸುವುದರಲ್ಲಿ ಅರ್ಥ ಇಲ್ಲ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ನಾನು ಗ್ಯಾರಂಟಿ ಕೊಡುವುದನ್ನು ವಿರೋಧಿಸುತ್ತಿಲ್ಲ.
ಗ್ಯಾರಂಟಿ ಕೊಡಿ, ಆದರೆ ಗ್ಯಾರಂಟಿ ಹೆಸರಲ್ಲಿ ಆರ್ಥಿಕ ಪರಿಸ್ಥಿತಿ ಹಾಳು ಮಾಡಬೇಡಿ. ಮುಂದಿನ ಅಧಿಕಾರ ನಡೆಸುವ ಪೀಳಿಗೆ ಭವಿಷ್ಯ ಹಾಳು ಮಾಡಬೇಡಿ ಎಂದು ಅವರು ಹೇಳಿದ್ದಾರೆ. ಅನ್ನ ಭಾಗ್ಯ ಯೋಜನೆಗೂ ಷರತ್ತು, ಮಾರ್ಗಸೂಚಿ ಅಳವಡಿಸಿದ್ದಾರೆ. ಅಕ್ಕಿ ಕೊಡುವುದನ್ನು ಕಡಿತಗೊಳಿಸಿದ್ದಾರೆ. ಇದು ಮುಂದೆ ಯಾವ ಹಂತಕ್ಕೆ ಹೋಗುತ್ತದೆ ಎಂದು ಕಾದು ನೋಡಿ. ನಮಗೆ ಗ್ಯಾರಂಟಿ ಬಗ್ಗೆ ಯಾವುದೇ ಹೊಟ್ಟೆ ಉರಿ ಇಲ್ಲ. ಗ್ಯಾರಂಟಿ ಬೇಕಾದರೆ ಡಬಲ್ ಮಾಡಿಕೊಳ್ಳಿ, ಆದರೆ ರಾಜ್ಯವನ್ನು ದೀವಾಳಿ ಮಾಡಬೇಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.