ಬೆಂಗಳೂರು
ರೈತರು, ಮಠ-ಮಂದಿರಗಳ ಭೂಮಿ ಪಹಣಿಯಲ್ಲಿ ವಕ್ಫ್ ಹೆಸರು ನಮೂದು ಆಗಿದ್ದಕ್ಕೆ ಮತ್ತು ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದ್ದನ್ನು ವಿರೋಧಿಸಿ ಕರ್ನಾಟಕದ ಸ್ವಾಮೀಜಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು. ಆಗ ಭಾರತೀಯರೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಅಷ್ಟು ಪ್ರೀತಿ ಇದ್ದರೆ ನಿಮ್ಮ ಮನೆ, ಸೈಟ್ ಬರೆದುಕೊಡಿ” ಎಂದು ಹೇಳಿದ್ದಾರೆ.
ಸ್ವಾಮೀಜಿಗಳ ಈ ಹೇಳಿಕೆಗೆ ಸಚಿವ ಎಚ್.ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದು, “ಇದು ಮೂಲಭೂತ ಹಕ್ಕು, ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕಿದೆ. ದೇಶದ ಎಲ್ಲ ನಾಗರಿಕರಿಗೆ ಮತದಾನ ಹಕ್ಕು ಇದೆ. ಯಾರಾದರೂ ಹಾಗೆ ಹೇಳಿದರೆ ಅದು ತಪ್ಪು” ಎಂದರು.
ಚಂದ್ರಶೇಖರ್ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಸಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಟ್ವೀಟ್ ಮಾಡಿದ ಸಚಿವ ಡಾ. ಹೆಚ್ಸಿ ಮಹದೇವಪ್ಪ “ಮತೀಯ ಶಕ್ತಿಗಳ ವಿರುದ್ಧ ಅಷ್ಟೊಂದು ಹೋರಾಟ ನಡೆಸಿದ ಬಾಬಾ ಸಾಹೇಬರು. ಒಂದು ಮತ ಒಂದು ಮೌಲ್ಯವನ್ನು ಜಾರಿ ಮಾಡಿದ ಕಾರಣವನ್ನು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಇನ್ನು ಧರ್ಮದ ಹೆಸರಲ್ಲಿ ರಾಜಕೀಯ ದ್ವೇಷ ಹರಡುವ ಇಂತವರು. ತಮ್ಮ ಕೆಟ್ಟ ಪ್ರವೃತ್ತಿಗೆ ಕಡಿವಾಣ ಹಾಕಬೇಕು” ಎಂದು ಪೋಸ್ಟ್ ಹಾಕಿದ್ದಾರೆ.