ಬೆಂಗಳೂರು
ಕರ್ನಾಟಕದಲ್ಲಿ ಮೂರು ಸೇರಿ ದೇಶದಲ್ಲಿ 85 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದೇ ವೇಳೆ, ಶಿವಮೊಗ್ಗದ ಕೇಂದ್ರೀಯ ವಿದ್ಯಾಲಯದ ಎಲ್ಲ ತರಗತಿಗಳಿಗೆ ತಲಾ ಎರಡು ಸೆಕ್ಷನ್ಗಳನ್ನು ಹೊಸದಾಗಿ ಸೇರಿಸಲು ಕೂಡ ಸಂಪುಟ ಅನುಮೋದನೆ ನೀಡಿದೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಶಿವಮೊಗ್ಗ ಕೇಂದ್ರೀಯ ವಿದ್ಯಾಲಯದಲ್ಲಿ ಎಲ್ಲ ತರಗತಿಗಳಲ್ಲಿ ಎರಡು ಹೆಚ್ಚುವರಿ ವಿಭಾಗಗಳನ್ನು ಸೇರಿಸುವ ಮೂಲಕ ಕೇಂದ್ರ ಸರ್ಕಾರಿ ನೌಕರರ ಸಂಖ್ಯೆಯನ್ನು ಹೆಚ್ಚಿಸಲು ಅನುಮೋದನೆ ನೀಡಿದೆ.
85 ಕೇಂದ್ರೀಯವಿದ್ಯಾಲಯಗಳ ಸ್ಥಾಪನೆಗೆ ಮತ್ತು ಒಂದು ಕೇಂದ್ರೀಯ ವಿದ್ಯಾಲಯದ ವಿಸ್ತರಣೆಗೆ 5872.08 ಕೋಟಿ ರೂ. ನೀಡಲಾಗುತ್ತದೆ. ಇದರಲ್ಲಿ, ಹೊಸ ಕೇಂದ್ರ ವಿದ್ಯಾಲಯ ಸ್ಥಾಪನೆಗೆ 2862.71 ಕೋಟಿ ರೂ. ಮತ್ತು ನಿರ್ವಹಣೆಗಾಗಿ 3009.37 ಕೋಟಿ ರೂ. ನೀಡಲು ನಿರ್ಣಯ ಮಾಡಲಾಗಿದೆ.
ಕರ್ನಾಟಕದ ಯಾದಗಿರಿ ಜಿಲ್ಲೆಯ ಮುದ್ನಾಳ್ ಗ್ರಾಮ, ಚಿತ್ರದುರ್ಗ ಜಿಲ್ಲೆಯ ಕುಂಚಿಗನಾಳ ಗ್ರಾಮ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಎಳರಗಿ (ಡಿ) ಗ್ರಾಮದಲ್ಲಿ ಕೇಂದ್ರೀಯ ವಿದ್ಯಾಲಯಗಳು ಸ್ಥಾಪನೆ ಆಗಲಿವೆ.