ತುಂಗಭದ್ರಾ ಜಲಾಶಯಕ್ಕೆ ಮತ್ತೊಂದು ಆತಂಕ….!

ಕೊಪ್ಪಳ

    ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ ಕ್ರೆಸ್ಟ್​​ಗೇಟ್ ಕೊಚ್ಚಿಕೊಂಡು ಹೋಗಿ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಒಂದು ವಾರದ ನಿರಂತರ ಪ್ರಯತ್ನದ ಫಲವಾಗಿ ತಾತ್ಕಾಲಿಕ ಗೇಟ್ ಅಳವಡಿಕೆ ಮಾಡಲಾಗಿತ್ತು. ಇದೀಗ ಜಲಾಯಶದ ಇತರ ಕ್ರೆಸ್ಟ್​​ಗೇಟ್​ಗಳ ಬಗ್ಗೆಯೂ ತಜ್ಞರು ಆಘಾತಕಾರಿ ಮಾಹಿತಿ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ತುಂಗಭದ್ರಾ ಡ್ಯಾಂನ ಎಲ್ಲ ಗೇಟ್​ಗಳನ್ನೂ ಬದಲಾವಣೆ ಮಾಡಬೇಕು ಎಂದು ತಜ್ಞರು ಹೇಳಿದ್ದಾರೆ.

    ಯಾವುದೇ ಜಲಾಶಯದ ಕ್ರೆಸ್ಟ್​​ಗೇಟ್​ಗಳು, ಚೈನ್ ಲಿಂಕ್‌ಗಳನ್ನು ಪ್ರತಿ 50 ವರ್ಷಕ್ಕೊಮ್ಮೆ ಬದಲಾಯಿಸಬೇಕು. ಆದರೆ ತುಂಗಭದ್ರಾ ಜಲಾಶಯಕ್ಕೆ 70 ವರ್ಷಗಳ ಹಿಂದೆಯೇ ಕ್ರೆಸ್ಟ್​​ಗೇಟ್, ಚೈನ್ ಲಿಂಕ್​ಗಳನ್ನು ಅಳವಡಿಸಲಾಗಿದೆ. ಆ ನಂತರ ಈವರೆಗೆ ಒಮ್ಮೆಯೂ ಬದಲಾಯಿಸಿಲ್ಲ. ಹೀಗಾಗಿ ಎಲ್ಲಾ 33 ಕ್ರೆಸ್ಟ್​​ಗೇಟ್​​​ಗಳನ್ನು ಬದಲಿಸಬೇಕು ಎಂದು ಚರ್ಚೆಯಾಗುತ್ತಿದೆ.
    ತುಂಗಭದ್ರಾ ಜಲಾಶಯದ ತಾಂತ್ರಿಕ ತಜ್ಞರ ತಂಡ ಈಗಾಗಲೇ ಎರಡು ಬಾರಿ ಡ್ಯಾಂಗೆ ಬೇಟಿ ನೀಡಿ ಪರಿಶೀಲಿಸಿದೆ. ಕೇಂದ್ರ ಜಲಶಕ್ತಿ ಆಯೋಗದ ಅಧಿಕಾರಿಗಳ ತಂಡ ಕೂಡಾ ಕಳೆದ ವಾರ ಜಲಾಶಯಕ್ಕೆ ಬೇಟಿ ನೀಡಿ ಸ್ಥಿತಿಗತಿ ಅಧ್ಯಯನ ಮಾಡಿದೆ. ಈ ಬಗ್ಗೆ ತುಂಗಭದ್ರಾ ಜಲಾಶಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದಾರೆ.ಜಲಾಶಯ ನಿರ್ವಹಣೆ ಮಾಡುವುದು ಹೈದರಾಬಾದ್​ನಲ್ಲಿರುವ ತುಂಗಭದ್ರಾ ಜಲಾಶಯ ಮಂಡಳಿ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ. ಹೀಗಾಗಿ ಮಂಡಳಿ ಗೇಟ್ ಬದಲಾವಣೆ ಮಾಡುವುದಾದರೆ ನಮ್ಮ ಪಾಲಿನ ಹಣವನ್ನು ನೀಡಲು ಸಿದ್ಧ ಎಂದು ತುಂಗಭದ್ರಾ ಜಲಾಶಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

    ಬೇಸಿಗೆ ಸಮಯದಲ್ಲಿ ಹೊಸ ಗೇಟ್‌ಗಳ ಅಳವಡಿಕೆ ಕಾರ್ಯ ಆರಂಭಿಸಲು ಬೇಕಾದ ಸಿದ್ದತೆಯನ್ನು ಈಗಿನಿಂದಲೇ ಆರಂಭಿಸಬೇಕಿದೆ. 33 ಗೇಟ್‌ಗಳ ಅಳವಡಿಕೆಗೆ ಸಾಕಷ್ಟು ಸಮಯ ಬೇಕಾಗಿರುವುದರಿಂದ ಈಗಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.

Recent Articles

spot_img

Related Stories

Share via
Copy link