ನವದೆಹಲಿ:
38 ವರ್ಷದ ಭಾರತೀಯ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಅವರು ಬುಧವಾರ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ .ನವೆಂಬರ್ 6, 2011 ರಂದು ದೆಹಲಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಆರ್ ಅಶ್ವಿನ್ ಅವರು 106 ಪಂದ್ಯಗಳಲ್ಲಿ 537 ವಿಕೆಟ್ ಗಳನ್ನು ಪಡೆದಿದ್ದಾರೆ.
ಆರ್ ಅಶ್ವಿನ್ ಅವರು ಭಾರತದ ಅತ್ಯಂತ ಯಶಸ್ವಿ ಬೌಲರ್ ಆಗಿ 619 ವಿಕೆಟ್ಗಳನ್ನು ಪಡೆದ ಅನಿಲ್ ಕುಂಬ್ಳೆ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೆಯೇ 116 ಏಕದಿನ ಪಂದ್ಯಗಳಲ್ಲಿ 114 ಇನಿಂಗ್ಸ್ ಆಡಿರುವ ಅಶ್ವಿನ್ 6303 ಎಸೆತಗಳಲ್ಲಿ 156 ವಿಕೆಟ್ ಪಡೆದಿದ್ದಾರೆ. ಇನ್ನು 65 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಅಶ್ವಿನ್ 72 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಮೂರು ಸ್ವರೂಪಗಳಲ್ಲೂ 50 ಕ್ಕಿಂತ ಹೆಚ್ಚು ವಿಕೆಟ್ ಕಬಳಿಸಿದ ಟೀಮ್ ಇಂಡಿಯಾ ಬೌಲರ್ ಎನಿಸಿಕೊಂಡಿದ್ದಾರೆ.
ಸದ್ಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಅಶ್ವಿನ್ ಸರಣಿ ಮುಕ್ತಾಯಕ್ಕೂ ಮುನ್ನವೆ ನಿವೃತ್ತಿಯ ನಿರ್ಧಾರ ಘೋಷಿಸಿದ್ದಾರೆ.ಅಡಿಲೇಡ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಭಾಗವಹಿಸಿದ ನಂತರ ಅಶ್ವಿನ್ ನಿವೃತ್ತಿ ಘೋಷಿಸಿದರು. ಅನುಭವಿ ಆಫ್ ಸ್ಪಿನ್ನರ್ 5ನೇ ದಿನದ ಚಹಾದ ನಂತರ ಮಳೆ ವಿರಾಮದ ಸಮಯದಲ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿ ಹಿರಿಯ ಕ್ರಿಕೆಟಿಗ, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಸುದೀರ್ಘ ಮಾತಕತೆ ನಡೆಸಿ, ಪರಸ್ಪರ ಅಪ್ಪಿಕೊಂಡ ಭಾವುಕ ಕ್ಷಣ ಕಂಡುಬಂದಿತ್ತು.