ಹೈದರಾಬಾದ್:
ಪುಷ್ಪ-2 ಪ್ರೀಮಿಯರ್ ಶೋ ವೇಳೆ ನಡೆದಿದ್ದ ದುರಂತದಲ್ಲಿ ಮೃತಪಟ್ಟಿದ್ದ ಮಹಿಳೆಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಒಸ್ಮನಿಯಾ ವಿವಿ ಜಂಟಿ ಕ್ರಿಯಾ ಸಮಿತಿ ಎಂದು ಹೇಳಿಕೊಂಡ ಗುಂಪೊಂದು ಭಾನುವಾರ ನಟ ಅಲ್ಲು ಅರ್ಜುನ್ ಅವರ ನಿವಾಸದ ಬಳಿ ಹೂವಿನ ಕುಂಡಗಳು ಮತ್ತಿತರ ವಸ್ತುಗಳನ್ನು ಧ್ವಂಸಗೊಳಿಸಿ ಪುಂಡಾಟ ಮೆರೆದಿತ್ತು.
ಈ ಘಟನೆಯನ್ನು ಖಂಡಿಸಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ ಖಂಡಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮ ಕೈಗೊಳ್ಳುವಂತೆ ಡಿಜಿಪಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದ್ದಾರೆ.
ನಟ ಅಲ್ಲು ಅರ್ಜುನ್ ನಿವಾಸದ ಬಳಿ ಬಂದ ಪ್ರತಿಭಟನಾಕಾರರು, ಮನೆ ಮೇಲೆ ಕಲ್ಲು ತೂರಾಟ ಮತ್ತು ಟೊಮೆಟೋ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಪ್ರಶ್ನಿಸಿದ ಭದ್ರತಾ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದಾರೆ. ಕೆಲವು ಹೂ ಕುಂಡಗಳನ್ನು ಧ್ವಂಸಗೊಳಿಸಿದ್ದಾರೆ. ಸುದ್ದಿ ತಿಳಿದು ಜುಬಿಲಿ ಹಿಲ್ಸ್ ಪೊಲೀಸರು ಸ್ಥಳಕ್ಕೆ ಧಾವಿಸಿ, ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಧ್ವಂಸದಲ್ಲಿ ಪಾಲ್ಗೊಂಡ ಆರು ಮಂದಿ ಮತ್ತಿತರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾನೂನುಬಾಹಿರ ವರ್ತನೆ ಸಹಿಸಲು ಸಾಧ್ಯವಿಲ್ಲ. ಪ್ರತಿಭಟನಾಕಾರರು ಅಲ್ಲು ಅರ್ಜುನ್ ವಿರುದ್ಧ ಘೋಷಣೆ ಕೂಗಿ ಮೃತ ಮಹಿಳೆ ಕುಟುಂಬಕ್ಕೆ ರೂ. 1 ಕೋಟಿ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಸಿನಿಮಾ ಮಾಡಿ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡ್ತಾರೆ. ಸಿನಿಮಾ ನೋಡುವವರು ಸಾಯುತ್ತಿದ್ದಾರೆ ಎಂಬ ಫಲಕವನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದಾಗ ಅಲ್ಲು ಅರ್ಜುನ್ ಮನೆಯಲ್ಲಿ ಇರಲಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಘಟನೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಯಾವುದೇ ಲೋಪವನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.