ಹದಗೆಟ್ಟ ಹೆದ್ದಾರಿಗಳಿಗೆ ಹೊಣೆ ಯಾರು ….?

ತುಮಕೂರು:

     ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಬುಧವಾರ ರಾಷ್ಟ್ರೀಯ ಹೆದ್ದಾರಿಗೆ ಭೇಟಿ ನೀಡಿ ರಸ್ತೆ ಸುರಕ್ಷತಾ ನಿಯಮಗಳ ಪರಿಶೀಲನೆ ನಡೆಸಿ ಹೋಗಿದ್ದಾರೆ. ಬೆಂಗಳೂರು-ಪುಣೆ ಮಾರ್ಗದಲ್ಲಿ ಸಾಕಷ್ಟು ರಸ್ತೆ ಸಂಚಾರದ ಅವ್ಯವಸ್ಥೆಗಳು ಕಂಡುಬಂದಿವೆ. ಪರಿಶೀಲನೆಯ ಕ್ರಮ ಅಷ್ಟಕ್ಕೆ ನಿಲ್ಲದೆ ಮುಂದಿನ ಕಾರ್ಯಾಚರಣೆಗೆ ಅನುವು ಮಾಡಿಕೊಡಬೇಕು, ರಸ್ತೆ ಸಂಚಾರ ಸುಗಮ ಸಂಪರ್ಕಕ್ಕೆ ದಾರಿಯಾಗಬೇಕು ಎಂಬುದು ಈ ಭಾಗದಲ್ಲಿ ಸಂಚರಿಸುವ ಬಹುತೇಕ ಮಂದಿಯ ಅಭಿಪ್ರಾಯ.

    ಸರ್ಕಾರಗಳು ರಸ್ತೆ ಅಭಿವೃದ್ಧಿಗಾಗಿಯೇ ಸಾಕಷ್ಟು ಅನುದಾನ ಖರ್ಚು ಮಾಡುತ್ತಾ ಬಂದಿವೆ. ಟೋಲ್ ಸಂಗ್ರಹ ಕೇಂದ್ರಗಳು ಅಸ್ತಿತ್ವಕ್ಕೆ ಬಂದ ನಂತರ ಇವುಗಳ ನಿರ್ವಹಣೆ ಮತ್ತು ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲಾಗಿದೆ. ಹೆದ್ದಾರಿ ರಸ್ತೆಗಳ ನಿರ್ವಹಣೆಗಾಗಿಯೇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವದಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೇಲ್ವಿಚಾರಣೆ ನಡೆಸುತ್ತವೆ. ಇಷ್ಟಾದರೂ ಇಂದಿಗೂ ಹೆದ್ದಾರಿ ಸುರಕ್ಷತೆಗಳು ಸಮರ್ಪಕವಾಗಿಲ್ಲ ಎಂಬುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

    ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಎಂದು ರಸ್ತೆಗಳನ್ನು ವಿಂಗಡಿಸಲಾಗಿದೆ. ಇವುಗಳ ನಿರ್ವಹಣೆ ಮತ್ತು ಅಭಿವೃದ್ಧಿಯ ಹೊಣೆ ಲೋಕೋಪಯೋಗಿ ಇಲಾಖೆಯದ್ದು. ರಾಜ್ಯದಲ್ಲಿ ವ್ಯಾಪಿಸಿರುವ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿ ರಾಷ್ಟಿçÃಯ ಅಭಿವೃದ್ಧಿ ಪ್ರಾಧಿಕಾರದವರು ನಿರ್ವಹಿಸುತ್ತಾರೆ.

    ಟೋಲ್ ಶುಲ್ಕ ಸಂಗ್ರಹಣೆ ಮಾಡುವ ಕೇಂದ್ರಗಳ ಭಾಗದಲ್ಲಿ ಹಾದು ಹೋಗುವ ಹೆದ್ದಾರಿ ರಸ್ತೆಗಳು ಶುಲ್ಕಕ್ಕೆ ತಕ್ಕಂತೆ ಸಮರ್ಪಕವಾಗಿರಬೇಕು. ಕಾಲ ಕಾಲಕ್ಕೆ ಇವುಗಳ ನಿರ್ವಹಣೆ ಮಾಡಬೇಕು. ಆದರೆ ಅಂತಹ ವ್ಯವಸ್ಥೆಗಳೇ ಸರಿಯಾಗಿ ಇಲ್ಲದೆ ಇರುವುದು ವಿಪರ್ಯಾಸ.

    ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 206, 48, 75, 150ಎ, 234 ಸೇರಿ ಒಟ್ಟು 5 ರಾಷ್ಟಿçÃಯ ಹೆದ್ದಾರಿಗಳು ಹಾದು ಹೋಗುತ್ತವೆ. ಆದರೆ ಈ ಹೆದ್ದಾರಿಗಳು ಅನೇಕ ಕಡೆಗಳಲ್ಲಿ ಗುಂಡಿ, ಅವೈಜ್ಞಾನಿಕ ಕಾಮಗಾರಿಗಳಿಂದ ನರಳುತ್ತಾ ಬಂದಿವೆ. ಜಿಲ್ಲಾ ವ್ಯಾಪ್ತಿಯಲ್ಲಿಯೇ 40 ಡೇಂಜರ್ ಬ್ಲಾಕ್ ಸ್ಪಾಟ್‌ಗಳು ಇರುವುದನ್ನು ಕಳೆದ ವರ್ಷವೇ ಗುರುತಿಸಲಾಗಿತ್ತು.

    ತುಮಕೂರು-ತಿಪಟೂರು ಮಾರ್ಗವಾಗಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆಗಲೇ ಕಿಬ್ಬನಹಳ್ಳಿ ಕ್ರಾಸ್ ಬಳಿಯ ರಜತಾದ್ರಿಪುರ ಗೇಟ್ ಬಳಿ ಟೋಲ್ ಸಂಗ್ರಹ ನಡೆಯುತ್ತಿದೆ. ತುಮಕೂರಿಗೆ ತಲುಪುವ ವೇಳೆಗೆ ಬಹಳಷ್ಟು ಕಡೆಗಳಲ್ಲಿ ರಸ್ತೆ ಸಂಚಾರ ಸಮರ್ಪಕವಾಗಿಲ್ಲ. ಅಲ್ಲಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ. ರಸ್ತೆ ಸಂಪೂರ್ಣಗೊಂಡಾಗ ಅಥವಾ ಶೇ.90 ರಷ್ಟು ಪೂರ್ಣವಾದಾಗ ಶುಲ್ಕ ಸಂಗ್ರಹಿಸಲಿ. ಅದು ಬಿಟ್ಟು ಈಗಲೇ ಶುಲ್ಕ ಸಂಗ್ರಹಕ್ಕೆ ಮುಂದಾಗಿದ್ದು ಏಕೆ ಎಂದು ಆ ಭಾಗದಲ್ಲಿ ಸಾರ್ವಜನಿಕರು ಪ್ರತಿಭಟನೆಗೆ ಇಳಿದರು. ಯಾರಿಂದಲೂ ಇದಕ್ಕೆ ಉತ್ತರ ಸಿಗಲಿಲ್ಲ. ಚುನಾವಣೆಗಳು ಹತ್ತಿರ ಬಂದವು, ಕ್ರಮೇಣ ಎಲ್ಲವೂ ಮರೆತು ಹೋಯಿತು.

    ಸರ್ವೀಸ್ ರಸ್ತೆಗಳಂತೂ ಅದ್ವಾನಗೊಂಡಿವೆ. ಜಿಲ್ಲೆಯ ಮಾರ್ಗವಾಗಿ ಹಾದು ಹೋಗಿರುವ ಬೆಂಗಳೂರು-ಪುಣೆ ಮಾರ್ಗದ ರಾಷ್ಟಿçÃಯ ಹೆದ್ದಾರಿ 48 ರಲ್ಲಿ ಸಂಭವಿಸುವ ಅಪಘಾತಗಳು ಗಾಬರಿ ಮೂಡಿಸುತ್ತಿವೆ. ಈ ಭಾಗದಲ್ಲಿ 762ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಚಿಕ್ಕಹಳ್ಳಿ, ಪಂಡಿತನಹಳ್ಳಿಗೇಟ್, ಕಳ್ಳಂಬೆಳ್ಳ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗಳ ಬಗ್ಗೆ ಆಗಾಗ ವರದಿಗಳು ಬರುತ್ತಲೇ ಇವೆ. ತುಮಕೂರು ಹೊರ ವಲಯದ ಶಿರಾ ಬೈಪಾಸ್ ರಸ್ತೆಯಿಂದ ಕ್ಯಾತ್ಸಂದ್ರ ಸಂಪರ್ಕಿಸುವ ಬಟವಾಡಿವರೆಗೂ ಇರುವ ಹೆದ್ದಾರಿ ಭಾಗವನ್ನು ಗಮನಿಸಿದರೆ ಈ ಅವ್ಯವಸ್ಥೆಯ ದರ್ಶನವಾಗುತ್ತದೆ.

     ಕಳೆದ ಐದಾರು ತಿಂಗಳ ಹಿಂದಷ್ಟೇ ಹೆದ್ದಾರಿ ಡಾಂಬರೀಕರಣ ನಡೆಯಿತು. ಅದೂ ಸಹ ಪ್ರತಿಭಟನೆಗಳು ನಡೆದ ತರುವಾಯ. ತುಮಕೂರು ಹೊರಗಿನ ಈ ರಸ್ತೆ ಭಾಗದಲ್ಲಿ ವಿಪರೀತ ಗುಂಡಿ ಗುದ್ದರಗಳು ಬಿದ್ದು ಸಂಚಾರಕ್ಕೆ ತೀವ್ರ ಅಡಚಣೆ ಮತ್ತು ಅಪಘಾತಗಳು ಸಂಭವಿಸುವುದು ಹೆಚ್ಚಿದಂತೆಲ್ಲಾ ಸಾರ್ವಜನಿಕ ಆಕ್ರೋಶ ಹೆಚ್ಚಾಯಿತು. ಆಗ ಗುಂಡಿಗಳನ್ನು ಮುಚ್ಚಲಾಯಿತು. ಇದಾದ ನಂತರ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಯಿತಾದರೂ ಹೆದ್ದಾರಿಯ ಪಕ್ಕದಲ್ಲೇ ಹಾದು ಹೋಗುವ ಸೇವಾ (ಸರ್ವೀಸ್) ರಸ್ತೆಗಳ ಸ್ಥಿತಿ ಅತ್ಯಂತ ಅಧೋಗತಿಗೆ ಇಳಿದಿದೆ.

    ಹೆದ್ದಾರಿಗಳಲ್ಲಿ ರಭಸವಾಗಿ ವಾಹನಗಳು ಬರುತ್ತಿದ್ದು, ಪಕ್ಕದಲ್ಲೇ ಹಾದು ಹೋಗಿರುವ ಸರ್ವೀಸ್ ರಸ್ತೆಗಳು ಸಮರ್ಪಕವಾಗಿ ಇಲ್ಲದೆ ಇರುವುದು, ಗೋಚರವಾಗದೆ ಇರುವುದು, ಎಲ್ಲೆಂದರಲ್ಲಿ ರಸ್ತೆಗಳು ಗುಂಡಿಬಿದ್ದು ಅಡಚಣೆ ಉಂಟು ಮಾಡುತ್ತಿರುವುದು ಸಾಮಾನ್ಯವಾಗಿದ್ದು, ನಗರ ವಾಸಿಗಳು ನಿತ್ಯ ನರಕ ಅನುಭವಿಸುವಂತಾಗಿದೆ.

     ಶಿರಾಗೇಟ್‌ನಿಂದ ಬಟವಾಡಿಯ ತನಕ ವಿವಿಧ ಕೈಗಾರಿಕೆಗಳು, ವಾಣಿಜ್ಯ ಸಂಕೀರ್ಣಗಳು ಇದ್ದು, ಇಲ್ಲಿ ಓಡಾಡುವವರೆಲ್ಲ ಸುವ್ಯವಸ್ಥಿತ ಸರ್ವೀಸ್ ರಸ್ತೆಗೆ ಆಗ್ರಹಿಸುತ್ತಲೇ ಬಂದಿದ್ದಾರೆ.2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಭಾಗದ ರಸ್ತೆ ಅದ್ವಾನಗಳ ವಿರುದ್ಧ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ಹೆದ್ದಾರಿ ಪ್ರಾಧಿಕಾರಗಳ ಅಧಿಕಾರಿಗಳನ್ನು ಭೇಟಿ ಮಾಡಿ ಗಮನ ಸೆಳೆಯುವ ಪ್ರಯತ್ನ ನಡೆಯಿತು. ವಿವಿಧ ಸಂಘಟನೆಗಳ ಮುಖಂಡರು, ಕೈಗಾರಿಕಾ ಸಂಘ ಸಂಸ್ಥೆಗಳು ಜೊತೆಗೂಡಿ ಪ್ರತಿಭಟನೆ ನಡೆಸಿದರು.

     ಆನಂತರ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಮನವಿ ಸ್ವೀಕರಿಸಿ ಮಾತನಾಡಿದ್ದ ಯೋಜನಾಧಿಕಾರಿ ಶಿರಿಕ್ ಗಂಗಾಧರ್ ತುಮಕೂರಿನಿಂದ ನೆಲಮಂಗಲದವರೆಗೆ ಆರು ಪಥದ ನಿರ್ಮಾಣಕ್ಕೆ ಒಪ್ಪಂದ ಆಗಿದ್ದು, ಕಾಮಗಾರಿ ಆರಂಭವಾಗುತ್ತಿದೆ. ತುಮಕುರು ಬೈಪಾಸ್ ರಸ್ತೆ ಕಾಮಗಾರಿ 2 ತಿಂಗಳಿನಲ್ಲಿ ಆರಂಭಗೊಳ್ಳಲಿದೆ, ಗುಂಡಿಗಳನ್ನು ಮುಚ್ಚಲಾಗಿದೆ, 6 ಪಥದ ರಸ್ತೆ ನಿರ್ಮಾಣವಾಗುವುದರ ಜೊತೆಗೆ ಸುಸಜ್ಜಿತ ಸೇವಾಪಥ ರಸ್ತೆಯನ್ನೂ ನಿರ್ಮಿಸಲಾಗುವದು. ಇನ್ನು ಕೆಲವೇ ತಿಂಗಳಲ್ಲಿ ಈ ಕಾರ್ಯ ಆರಂಭವಾಗಲಿದೆ ಎಂದಿದ್ದರು. ಆದರೆ ಅವರು ಹೇಳಿದಂತೆ ಸೇವಾಪಥ ರಸ್ತೆಯ ಸುರಕ್ಷತಾ ಕಾಮಗಾರಿಗಳು ನಡೆದೇ ಇಲ್ಲ. ಮತ್ತಷ್ಟು ಅದ್ವಾನಗೊಂಡಿವೆ.

    ಅಪಘಾತಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕೆಲವೊಂದು ಕ್ರಮ ಕೈಗೊಳ್ಳಲು ಮುಂದಾಗಿದೆ. ಹೆದ್ದಾರಿಯ ಕೆಲವು ಕಡೆ ಎಎಂಪಿಆರ್ ಕ್ಯಾಮೆರಾ ಅಳವಡಿಸಲಾಗಿದೆ. ಅತಿವೇಗ ನಿಯಂತ್ರಣ, ಸೀಟ್ ಬೆಲ್ಟ್ ಇಲ್ಲದೆ ವಾಹನ ಚಾಲನೆ, ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತನಾಡುವುದೂ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸುವುದನ್ನು ಸರೆಯಿಡಿಯಲು ಈ ಕ್ಯಾಮೆರಾ ಅಳವಡಿಸಿರುವುದಾಗಿ ಪೊಲೀಸ್ ಇಲಾಖೆಯ ಮೂಲಗಳು ತಿಳಿಸುತ್ತವೆ.

    ಸಂಚಾರ ಸುರಕ್ಷತೆಗೆ ಪೊಲೀಸ್ ಇಲಾಖೆ ಕೈಗೊಳ್ಳುವ ಕ್ರಮಗಳೆಲ್ಲವೂ ಸರಿ. ಹೆಲ್ಮೆಟ್ ಇಲ್ಲದೆ ಸಂಚಾರ ಮಾಡುವವರ ಮೇಲೆ ದಂಡ ಹಾಕುವುದು, ಅತಿವೇಗ ನಿಯಂತ್ರಣ ಹೀಗೆ ನಾನಾ ತರಹದ ಕ್ರಮಗಳನ್ನು ಕೈಗೊಳ್ಳಲಿ. ಇದಕ್ಕೂ ಮುನ್ನ ರಸ್ತೆ ಅದ್ವಾನಗಳು, ಸರ್ವೀಸ್ ರಸ್ತೆಗಳು ಸಮರ್ಪಕವಾಗಿ ಇಲ್ಲದಿದ್ದರೂ ಟೋಲ್ ಶುಲ್ಕ ವಸೂಲಿ ಮಾಡುತ್ತಿರುವುದು ಇವೆಲ್ಲವೂ ಗಮನಕ್ಕೆ ಬರಬೇಕಲ್ಲವೆ? ಸಂಚಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆಯೇ ಹೊರತು ಹೆದ್ದಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಇಲಾಖೆಗಳ ಮೇಲೂ ಕ್ರಮ ಜರುಗಿಸಬೇಕಲ್ಲವೆ?

     ಇದೀಗ ಹೆದ್ದಾರಿ ಪರಿವೀಕ್ಷಣೆ ಮಾಡಿ ಹೋಗಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು ಇಂತಹ ವಿಷಯಗಳ ಬಗ್ಗೆಯೂ ಹೆಚ್ಚು ಚರ್ಚಿಸುವುದು ಅಗತ್ಯ. ಸಂಬAಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಪೊಲೀಸ್ ಇಲಾಖೆಯ ಈ ವರದಿಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತವೆ. ಅಪಘಾತ ತಡೆಯಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡರಷ್ಟೇ ಸಾಲದು. ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆಗಳು ಜಂಟಿಯಾಗಿ ಸಮಲೋಚಿಸುವ, ಅಗತ್ಯ ಕ್ರಮ ಕೈಗೊಳ್ಳುವ ಕಡೆಗೆ ಗಮನ ಹರಿಸಿದರೆ ರಸ್ತೆಗಳು ಅದ್ವಾನದಿಂದ ಮುಕ್ತಿಗೊಳ್ಳಲಿವೆ. ಸಂಚಾರವು ಸುಗಮವಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap