ದಾವಣಗೆರೆ:
ಕ್ಷುಲ್ಲಕ ವಿಚಾರಕ್ಕೆ ಇಡೀ ಊರಿಗೇ ಊರೇ ರಣರಂಗವಾಗಿರುವ ಘಟನೆಗೆ ದಾವಣಗೆರೆಯಲ್ಲಿ ವರದಿಯಾಗಿದೆ. ಕುರ್ ಕುರೇ ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ ನಡೆದು, 10ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟು ಸಾಲದೆನ್ನುವಂತೆ 25 ಮಂದಿ ಊರನ್ನೇ ಬಿಟ್ಟು ಹೋಗಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕ್ಷುಲ್ಲಕ ವಿಚಾರಕ್ಕೆ ಎರಡು ಕುಟುಂಬಗಳು ಬಡಿದಾಡಿಕೊಂಡಿವೆ. ಹೊನ್ನೇಬಾಗಿಯ ಅತೀಫ್ ಉಲ್ಲಾ ಹಾಗೂ ಸದ್ದಾಂ ಎಂಬುವವರ ಕುಟುಂಬಸ್ಥರು ಕುರ್‌ಕುರೇ ವಿಚಾರಕ್ಕೆ ನಡುರಸ್ತೆಯಲ್ಲಿ ಬಡಿದಾಟ ನಡೆಸಿವೆ. ಪರಿಣಾಮವಾಗಿ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅತೀಪ್ ಉಲ್ಲಾ ಹೊನ್ನೆಬಾಗಿ ಗ್ರಾಮದಲ್ಲಿ ಸಣ್ಣದೊಂದು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಅತೀಫ್ ಉಲ್ಲಾ ಅಂಗಡಿಯಲ್ಲಿ ಸದ್ದಾಂ ಕುಟುಂಬದ ಮಕ್ಕಳು ಕುರ್‌ಕುರೇ ತಿಂಡಿಯನ್ನು ಕೊಂಡುಕೊಂಡಿದ್ದರು. ಇದರ ಬೆನ್ನಲ್ಲೇ ಈ ಕುರ್‌ಕುರೇ ಅವಧಿ ಮೀರಿದೆ ಎಂಬ ಗಲಾಟೆ ಶುರುವಾಗಿತ್ತು. ಬೇರೆ ಪ್ಯಾಕ್ ಕೊಡುವಂತೆ ಸದ್ದಾಂ ಕುಟುಂಬ ತಕರಾರು ಎತ್ತಿದ್ದು, ಆಗ ಜಗಳ ಶುರುವಾಗಿದೆ. ಈ ಸಮಯದಲ್ಲಿ ಅತೀಫ್ ಹಾಗೂ ಸದ್ದಾಂ ಕುಟುಂಬಸ್ಥರು ನಡುವೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ಮೀತಿ ಮೀರಿ ಎರಡು ಕುಟುಂಬದ ಸದಸ್ಯರು ಪರಸ್ಪರ ಕೈ ಕೈ ಮೀಲಾಯಿಸಿದ್ದಾರೆ.
ಇದರ ಬೆನ್ನಲ್ಲೇ ಸದ್ದಾಂ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಇದಾದ ಬಳಿಕ ಲತೀಫ್ ಕುಟುಂಬಸ್ಥರು ಕೋಪದಲ್ಲಿ ಸದ್ದಾಂ ಅವರ ಹೊಟೇಲ್ ಅನ್ನು ಧ್ವಂಸ ಮಾಡಿ ಅವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ಲತೀಫ್ ಅಂಗಡಿಯನ್ನೂ ಸದ್ದಾಂ ಕುಟುಂಬಸ್ಥರು ಪುಡಿಗಟ್ಟಿದ್ದಾರೆ. ಎರಡೂ ಕುಟುಂಬಗಳ ಮಾರಾಮಾರಿಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು. ಗಲಾಟೆಯನ್ನು ಬಿಡಿಸಲು ಬಂದವರ ಮೇಲೆ ಹಲ್ಲೆ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಎರಡು ಕಡೆಯವರಿಂದ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಪೊಲೀಸರ ಭಿಗಿ ಭದ್ರತೆ ವಹಿಸಲಾಗಿದೆ. ಇನ್ನು ಪ್ರಕರಣದ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಗ್ರಾಮದ 25ಕ್ಕೂ ಹೆಚ್ಚು ಜನ ಊರು ಬಿಟ್ಟಿದ್ದಾರೆ.