ಪೋಡ್​​ಕ್ಯಾಸ್ಟ್ ಸೂಪರ್​ಸ್ಟಾರ್ ನಿಖಿಲ್ ಕಾಮತ್ ಜೊತೆ ಪ್ರಧಾನಿ ಮೋದಿ :ಅಧಿಕೃತ ವಿಡಿಯೋ ಸದ್ಯದಲ್ಲೇ

ನವದೆಹಲಿ

    ಪ್ರಧಾನಿ ನರೇಂದ್ರ ಮೋದಿ ಪೋಡ್​ಕ್ಯಾಸ್ಟ್ ಪ್ರಪಂಚಕ್ಕೆ ಪದಾರ್ಪಣೆ ಮಾಡಿದ್ದಾರೆ. ತಮ್ಮ ಚೊಚ್ಚಲ ಪೋಡ್​ಕ್ಯಾಸ್ಟ್ ಸಂದರ್ಶನ ನೀಡಿದ್ದಾರೆ. ಪೋಡ್​ಕ್ಯಾಸ್ಟ್ ರಂಗಕ್ಕೆ ಹೊಸಬರಾದರೂ ಮಿಂಚಿನ ವೇಗದಲ್ಲಿ ಗಮನ ಸೆಳೆಯುತ್ತಿರುವ ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಅವರ ಯೂಟ್ಯೂಬ್ ಚಾನಲ್​ಗೆ ನರೇಂದ್ರ ಮೋದಿ ಸಂದರ್ಶನ ಕೊಟ್ಟಿದ್ದಾರೆ. ಮೊನ್ನೆ ಕೆಲ ಸೆಕೆಂಡ್​ಗಳ ಸಣ್ಣ ಟೀಸರ್ ಬಿಟ್ಟಿದ್ದ ನಿಖಿಲ್ ಕಾಮತ್ ನಿನ್ನೆ (ಜ. 9) ಎರಡು ನಿಮಿಷದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಟೀಸರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಗುವಿನಲ್ಲಿ ಗುರುತಿಸಬಹುದಿತ್ತು. ಟ್ರೇಲರ್​ನಲ್ಲಿ ಅವರೇ ಕಾಣಿಸಿಕೊಂಡಿದ್ದಾರೆ. ಸಂದರ್ಶನದ ಕೆಲ ಸಾರಾಂಶಗಳನ್ನು ನಿಖಿಲ್ ಕಾಮತ್ ಈ ಟ್ರೇಲರ್​ನಲ್ಲಿ ಬಿಚ್ಚಿಟ್ಟಿದ್ದಾರೆ.

   ನಿಖಿಲ್ ಕಾಮತ್ ಬಿಡುಗಡೆ ಮಾಡಿದ ಟ್ರೇಲರ್​ನಲ್ಲಿ ನರೇಂದ್ರ ಮೋದಿ ಅವರು ಕೆಲ ವಿಚಾರಗಳ ಬಗ್ಗೆ ಮಾತನಾಡಿರುವುದನ್ನು ಕಾಣಬಹುದು. ತಪ್ಪು ಮಾಡುವುದು ಸಹಜ. ತಾನೂ ಕೂಡ ಹಿಂದೆ ತಪ್ಪು ಮಾಡಿದ್ದೇನೆ. ತಾನೊಬ್ಬ ಮನುಷ್ಯನೇ ಹೊರತು ದೇವನಲ್ಲ ಎಂದು ನರೇಂದ್ರ ಮೋದಿ ಹೇಳುತ್ತಾರೆ.
  ಇಂದಿನ ಯುವಕರು ರಾಜಕೀಯಕ್ಕೆ ಬರುವಾಗ ಮಹತ್ವಾಕಾಂಕ್ಷೆ ಮಾತ್ರವಲ್ಲ, ಒಂದು ಗುರಿ (ಮಿಷನ್) ಇಟ್ಟುಕೊಂಡಿರಬೇಕು ಎಂದು ಅದೇ ಟ್ರೇಲರ್​ನಲ್ಲಿ ಮೋದಿ ಸಲಹೆ ನೀಡಿರುವ ತುಣುಕು ಇದೆ. ಇನ್ನು, ಭಾರತದ ವಿದೇಶಾಂಗ ನೀತಿ ತಟಸ್ಥ ಅಲ್ಲ ಎಂಬುದನ್ನು ಪ್ರಧಾನಿಗಳು ಬಹಳ ಸ್ಪಷ್ಟಪಡಿಸುತ್ತಾರೆ. ಭಾರತವು ಶಾಂತಿಯ ಪರವಾಗಿರುತ್ತದೆ ಎಂದು ಸಾರಿಹೇಳುತ್ತಾರೆ.
  ನಿಖಿಲ್ ಕಾಮತ್ ಅವರು ಬಿಡುಗಡೆ ಮಾಡಿರುವ ಟ್ರೇಲರ್​ನಲ್ಲಿ ಪೂರ್ಣ ಎಪಿಸೋಡ್ ಯಾವಾಗ ಪ್ರಸಾರ ಆಗುತ್ತದೆ ಎಂಬುದನ್ನು ತಿಳಿಸಿಲ್ಲ. ಹಿಂದಿನ ಎಪಿಸೋಡ್​ಗಳನ್ನು ಗಮನಿಸಿದಾಗ, ಟ್ರೇಲರ್​ಗಳು ಸುಮಾರು 6ರಿಂದ 12 ದಿನಗಳ ಹಿಂದೆ ಬಿಡುಗಡೆ ಆಗಿದ್ದಿದೆ. ಸಂಕ್ರಾಂತಿ ಹಬ್ಬವಿರುವ ಜನವರಿ 14, ಮಂಗಳವಾರದಂದು ಈ ಎಪಿಸೋಡ್ ಪ್ರಸಾರವಾದರೂ ಅಚ್ಚರಿ ಇಲ್ಲ. ಜನವರಿ ಮೂರನೇ ವಾರದಲ್ಲಿ ಈ ಎಪಿಸೋಡ್ ನಿರೀಕ್ಷಿಸಬಹುದು.

Recent Articles

spot_img

Related Stories

Share via
Copy link