ನವದೆಹಲಿ:
‘ಒಂದು ರಾಷ್ಟ್ರ, ಒಂದು ಚುನಾವಣೆ’ (ಒಎನ್ಒಇ) ಉಪಕ್ರಮಕ್ಕೆ ಬೆಂಬಲ ಪಡೆಯಲು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದೆ. ಪ್ರತಿಪಕ್ಷಗಳನ್ನು ಎದುರಿಸಲು ಮತ್ತು ಮಹತ್ವದ ಮಸೂದೆಯನ್ನು ಹೇಗೆ ಮಂಡಿಸುವುದು ಎಂಬುದರ ಕುರಿತು ಕಾರ್ಯತಂತ್ರ ರೂಪಿಸಲು ಇತ್ತೀಚೆಗೆ ಎನ್ಡಿಎ ಸಭೆ ನಡೆಸಿತು.
ಉದ್ದೇಶಿತ ಮಸೂದೆಯ ಸುಗಮ ಮಂಡನೆಗೆ ಎದುರಾಗಿರುವ ಎಲ್ಲಾ ಕಾನೂನು ಅಡೆತಡೆಗಳನ್ನು ನಿವಾರಿಸುವತ್ತಾ ಸರ್ಕಾರ ತನ್ನ ಗಮನ ಹರಿಸಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆಗೆ ಕೇಂದ್ರ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದೆ. ONOE ವ್ಯವಸ್ಥೆಯ ಅಗತ್ಯತೆ ಮತ್ತು ಸಂಭಾವ್ಯ ಪ್ರಯೋಜನಗಳನ್ನು, ವಿಶೇಷವಾಗಿ ಚುನಾವಣಾ ಸಂಬಂಧಿತ ವೆಚ್ಚಗಳನ್ನು ಕಡಿಮೆ ಮಾಡಲು, ಆಡಳಿತದ ದಕ್ಷತೆಯನ್ನು ಸುಧಾರಿಸಲು ಮತ್ತು ಹೆಚ್ಚು ಸುವ್ಯವಸ್ಥಿತವಾಗಿ ಚುನಾವಣೆ ನಡೆಸುವ ಸಂದೇಶವನ್ನು ನೇರವಾಗಿ ಸಾರ್ವಜನಿಕರಿಗೆ ಕೊಂಡೊಯ್ಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಂತ್ರಿಗಳಿಗೆ ನಿರ್ದೇಶಿಸಿದ್ದಾರೆ ಎಂದು ಮೂಲಗಳು ಸೂಚಿಸಿವೆ.