ಮಂಡ್ಯ:
ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ವಿಸಿ ನಾಲೆಗೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, ಇಬ್ಬರು ನಾಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.ಮಂಡ್ಯದ ತಿಬ್ಬನಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಕಾರು ಬಿದ್ದು ಓರ್ವ ವ್ಯಕ್ತಿ ಸಾವಪ್ಪಿದ್ದಾರೆ. ಅಂತೆಯೇ ಈ ಘಟನೆಯಲ್ಲಿ ಓರ್ವ ವ್ಯಕ್ತಿಯನ್ನು ರಕ್ಷಿಸಲಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರತ್ಯಕ್ಷ ದರ್ಶಿಗಳ ಪ್ರಕಾರ ವಿಸಿ ನಾಲೆಗೆ ಬಿದ್ದ ಕಾರಿನಲ್ಲಿ ಒಟ್ಟು ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿದ್ದ ನಾಲ್ವರು ಮಂಡ್ಯದ ಹಾಲಹಳ್ಳಿ ಸ್ಲಂ ನಿವಾಸಿಗಳಾಗಿದ್ದು, ಈ ಪೈಕಿ ಕಾರು ಮಾಲೀಕ ಫಯಾಜ್ ಸಾವನ್ನಪ್ಪಿದ್ದರೆ, ನಯಾಜ್ ಎಂಬಾತನನ್ನು ರಕ್ಷಣೆ ಮಾಡಲಾಗಿದೆ. ಉಳಿದ ಇಬ್ಬರು ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಸದ್ಯ ಶಿವಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ವಿಸಿ ನಾಲೆಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಮಂಡ್ಯ ಡಿಸಿ ಡಾ.ಕುಮಾರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಇನ್ನೋರ್ವ ಜೀವಂತವಾಗಿ ಸಿಕ್ಕಿದ್ದಾನೆ. ಇಬ್ಬರು ನಾಪ್ಪತ್ತೆಯಾಗಿದ್ದಾರೆ. ಅವರ ಹುಡುಕಾಟ ನಡೆಯುತ್ತಿದೆ. ವಿಸಿ ನಾಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ನೀರನ್ನು ನಿಲ್ಲಿಸಲು ಹೇಳಿದ್ದೇವೆ. 5 ಗಂಟೆಗೆ ನೀರು ಕಡಿಮೆಯಾಗುತ್ತದೆ. ಬಳಿಕ ಕಾರು, ನಾಪತ್ತೆಯಾಗಿರುವವರನ್ನು ಹುಡುಕುತ್ತೇವೆ’ ಎಂದು ತಿಳಿಸಿದ್ದಾರೆ.
ಇನ್ನು ವಿಸಿ ನಾಲೆಯಲ್ಲಿ ಇಂತಹ ದುರಂತ ಇದೇ ಮೊದಲೇನಲ್ಲ.. ಈ ಹಿಂದೆ 2023ರ ಜುಲೈ 23ರಂದು ಕಾರೊಂದು ಬಿದ್ದಿತ್ತು. ಇದೀಗ ಅದೇ ಜಾಗದಲ್ಲಿ ಮತ್ತೊಂದು ದುರಂತಕ್ಕೀಡಾಗಿದೆ.