ನವದೆಹಲಿ:
ಅಕ್ರಮ ವಲಸಿಗರನ್ನು ದೇಶಗಳಿಗೆ ಗಡಿಪಾರು ಮಾಡುವ ಪ್ರಕ್ರಿಯೆ ಹೊಸದಲ್ಲ ಮತ್ತು ಕೈಗೆ ಕೋಳ ಹಾಕುವುದು ಅಮೆರಿಕದ ನೀತಿ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಎಲ್ಲಾ ದೇಶಗಳು ತಮ್ಮ ಪ್ರಜೆಗಳು ವಿದೇಶದಲ್ಲಿ ಅಕ್ರಮವಾಗಿ ನೆಲೆಸಿರುವುದು ಕಂಡುಬಂದರೆ ಅವರನ್ನು ವಾಪಸ್ ಕರೆಸಿಕೊಳ್ಳಬೇಕು. ಅಕ್ರಮ ವಲಸೆಯನ್ನು ಕೂಡಲೇ ತಡೆಯಬೇಕು ಅಂತಲೂ ಅವರು ಕರೆ ನೀಡಿದರು. ತಮ್ಮ ದೇಶದಲ್ಲಿ ಅಕ್ರಮ ವಲಸಿಗರು ಇದ್ದರೆ ವಾಪಸ್ ಕಳುಹಿಸುತ್ತಾರೆ. ಈ ಪ್ರಕ್ರಿಯೆ ಸಾಮಾನ್ಯವಾಗಿ ಎಲ್ಲಾ ದೇಶಗಳಲ್ಲೂ ಇದೆ. ಅಮೆರಿಕದಲ್ಲಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುತ್ತಿದ್ದಾರೆ. ಈ ಪ್ರಕ್ರಿಯೆ 2009ರಿಂದಲೂ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬುಧವಾರ(ಫೆ.5) ಅಮೆರಿಕದಿಂದ ಗಡಿಪಾರು ಮಾಡಲಾದ 104 ಭಾರತೀಯ ಅಕ್ರಮ ಭಾರತೀಯ ವಲಸಿಗರ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಜೈಶಂಕರ್ ವಿವರವಾಗಿ ಸ್ಪಷ್ಟನೆ ನೀಡಿದ್ದಾರೆ. ಇನ್ನು ಅಕ್ರಮ ವಲಸಿಗರ ಕೈಗೆ ಕೋಳ ಹಾಕುವುದು ಅಮೆರಿಕ ದೇಶದ ನೀತಿ. ಗೊಂದಲ ಮಾಡಿಕೊಳ್ಳಬಾರದು ಎಂದರು. ಗಡಿಪಾರಾದವರು ಮನೆಗೆ ಹಿಂದಿರುಗುವಾಗ ಕೆಟ್ಟದಾಗಿ ನಡೆಸಿಕೊಳ್ಳದಂತೆ ನೋಡಿಕೊಳ್ಳಲು ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
2010ರಲ್ಲಿ 799 ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿತ್ತು. 2011ರಲ್ಲಿ ಅಮೆರಿಕದಿಂದ 597 ಜನರನ್ನು ಕಳುಹಿಸಲಾಗಿತ್ತು. 2012 ರಲ್ಲಿ 530, 2013 ರಲ್ಲಿ 515, 2014ರಲ್ಲಿ 591 ಅಕ್ರಮ ವಲಸಿಗರು ಭಾರತಕ್ಕೆ ಹಿಂದಿರುಗಿದ್ದರು.
ಅಮೆರಿಕದಲ್ಲಿ ಟ್ರಂಪ್ ಆಡಳಿತ ಶುರುವಾಗುತ್ತಿದ್ದಂತೆ ಅಮೆರಿಕದಿಂದ ವಲಸಿಗರನ್ನು ಹೊರ ಹಾಕಲಾಗುತ್ತಿದೆ. ಬುಧವಾರವಷ್ಟೇ ಅಮೆರಿಕದಿಂದ ಹೊರಹಾಕಲ್ಪಟ್ಟ 205 ವಲಸಿಗರು ಭಾರತಕ್ಕೆ ಮರಳಿದ್ದಾರೆ. ಮಹಿಳೆಯರು ಮಕ್ಕಳು ಸೇರಿದಂತೆ ನಿನ್ನೆ ಪಂಜಾಬ್ನ ಅಮೃತಸರದಲ್ಲಿರುವ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸದ್ಯ ಅಲ್ಲಿಂದ ಮರಳಿದ ಅವರು ತಮ್ಮ ಶೋಚನೀಯ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದು, ಅಮೆರಿಕದ ಸೇನಾ ವಿಮಾನದಲ್ಲಿ ತಮ್ಮ ಕೈ ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು. ಯುದ್ಧ ಕೈದಿಗಳಂತೆ ನಮ್ಮನ್ನು ನೋಡಿಕೊಳ್ಳಲಾಯಿತು ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಗಡಿಪಾರು ಮಾಡಿದ ಭಾರತೀಯರನ್ನು ಅಮೆರಿಕದ ಮಿಲಿಟರಿ ವಿಮಾನಗಳ ಮೂಲಕ ತವರಿಗೆ ಕಳುಹಿಸಲಾಗಿದೆ. ಗಡಿಪಾರು ಮಾಡಲಾದವರಲ್ಲಿ ಒಬ್ಬರಾದ ಪಂಜಾಬ್ನ ಗುರುದಾಸ್ಪುರದ 36 ವರ್ಷದ ಜಸ್ಪಾಲ್ ಸಿಂಗ್, ಅಲ್ಲಿನ ಕರಾಳತೆಯನ್ನು ಬಿಚ್ಚಿಟಿದ್ದು, ಅಮೃತಸರದಲ್ಲಿ ಇಳಿದ ನಂತರವೇ ಕೈ, ಕಾಲುಗಳಿಗೆ ಹಾಕಿದ್ದ ಸಂಕೋಲೆಗಳನ್ನು ಬಿಚ್ಚಲಾಯಿತು ಎಂದು ಹೇಳಿದ್ದಾರೆ. ಈ ಮೊದಲು ನಮಗೆ ಭಾರತಕ್ಕೆ ಬರುತ್ತಿದ್ದೇವೆ ಎಂಬುದೂ ಸ್ಪಷ್ಟವಾಗಿ ತಿಳಿದಿರಲಿಲ್ಲ. ನಮ್ಮನ್ನು ಬೇರೆ ಶಿಬಿರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ನಾವು ಭಾವಿಸಿದ್ದೆವು.
ನಂತರ ಒಬ್ಬ ಪೊಲೀಸ್ ಅಧಿಕಾರಿ ನಮ್ಮನ್ನು ಭಾರತಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದರು. ನಮ್ಮ ಕೈಗಳಿಗೆ ಕೋಳ ಹಾಕಲಾಯಿತು, ಮತ್ತು ನಮ್ಮ ಕಾಲುಗಳಿಗೆ ಸರಪಳಿ ಹಾಕಲಾಯಿತು. ಅಮೃತಸರ ವಿಮಾನ ನಿಲ್ದಾಣದಲ್ಲಿ ಇವುಗಳನ್ನು ತೆರೆಯಲಾಯಿತು ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಭಾರತಕ್ಕೆ ವಾಪಸ್ ಕಳುಹಿಸುವ ಮೊದಲು ಅವರನ್ನು ಅಮೆರಿಕದಲ್ಲಿ 11 ದಿನಗಳ ಕಾಲ ಬಂಧನದಲ್ಲಿರಿಸಲಾಗಿತ್ತು ಎಂದು ಸಿಂಗ್ ಹೇಳಿದರು.