ಮುಡಾ ಹಗರಣ : ಸಿಎಂಗೆ ಬಿಗ್ ರಿಲೀಫ್‌ ….!

ಬೆಂಗಳೂರು :

   ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧದ ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

   ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ ತಕರಾರು ಅರ್ಜಿ ವಿಚಾರಣೆಯನ್ನು 2025ರ ಜನವರಿ 27ರಂದು ಪೂರ್ಣಗೊಳಿಸಿ, ಕಾಯ್ದಿರಿಸಿರುವ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಶುಕ್ರವಾರ ಪ್ರಕಟಿಸಿತು. ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಈ ಆದೇಶದಿಂದಾಗಿ ಸಿಬಿಐ ತನಿಖೆಯಿಂದ ಸಿದ್ದರಾಮಯ್ಯ ತಪ್ಪಿಸಿಕೊಂಡಿದ್ದಾರೆ. ಕಾನೂನು ಹೋರಾಟದಲ್ಲಿ ಸ್ವಲ್ಪ ನಿರಾಳರಾದಂತಾಗಿದೆ.

   ಸಿಎಂ ಪತ್ನಿಗೆ ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂಬರ್ 464ರ 3 ಎಕರೆ 16 ಗುಂಟೆ ಜಮೀನಿನ ಬದಲಿಗೆ ಸುಮಾರು 56 ಕೋಟಿ ಮೌಲ್ಯದ 14 ನಿವೇಶನಗಳನ್ನು ಅಕ್ರಮವಾಗಿ ನೀಡಲಾಗಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ . ಈ ಸಂಬಂಧ ತನಿಖೆ/ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಕೋರಿ ಸ್ನೇಹಮಯಿ ಕೃಷ್ಣ ಸೇರಿದಂತೆ ಮೂವರು ಸಾಮಾಜಿಕ ಕಾರ್ಯಕರ್ತರು 2024ರ ಜೂನ್-ಜುಲೈನಲ್ಲಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು.

   ಈ ಬಗ್ಗೆ ಪರಿಶೀಲನೆ ನಡೆಸಿ, ಪ್ರಕರಣದ ತನಿಖೆ/ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ರಾಜ್ಯಪಾಲರು ಆ.17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಆ.19ರಂದು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ತಿರಸ್ಕರಿಸಿದ ಸೆ.24ರಂದು ಹೈಕೋರ್ಟ್ ಆದೇಶಿಸಿತ್ತು.

   ಈ ಆದೇಶ ಹೊರಬಿದ್ದ ಬೆನ್ನಲ್ಲೇ ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಎಫ್ಐಆರ್ ದಾಖಲಾದ ದಿನವೇ ಅಂದರೆ ಸೆ.27ರಂದು ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

Recent Articles

spot_img

Related Stories

Share via
Copy link