ಬೆಂಗಳೂರು:
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ, ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೆಹಲಿಗೆ ಭೇಟ ನೀಡಿದ್ದು, ಶೀಘ್ರದಲ್ಲೇ ಅಮಿತ್ ಶಾ ಅವರು ಭೇಟಿ ಮಾಡಲಿದ್ದಾರೆಂದು ತಿಳಿದುಬಂದಿದೆ.
ಭಾನುವಾರವೇ ವಿಜಯೇಂದ್ರ ಅವರು ದೆಹಲಿಗೆ ತೆರಳಿದ್ದು, ಒಂದೆರಡು ದಿನಗಳ ಕಾಲ ಅಲ್ಲಿಯೇ ಇದ್ದು ಬಳಿಕ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ವಾಪಸ್ಸಾಗಲಿದ್ದಾರೆಂದು ಮೂಲಗಳು ತಿಳಿಸಿವೆ.
ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ದೆಹಲಿಯಲ್ಲಿ ಬಿಜೆಪಿ ಅಧಿಕಾರ ಮತ್ತು ಮಣಿಪುರದಲ್ಲಿ ಸಿಎಂ ಎನ್. ಬಿರೇನ್ ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಉಂಟಾಗಿರುವ ಬಿಕ್ಕಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯನಿರತರಾಗಿದ್ದು, ಬಿಡುವಾದ ಬಳಿಕ ಅಮಿತ್ ಶಾ ಅವರನ್ನು ಭೇಟಿ ಮಾಡಿ, ನಂತರವೇ ವಾಪಸ್ಸಾಗಲಿದ್ದಾರೆಂದು ವರದಿಗಳು ತಿಳಿಸಿವೆ.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರವಾಗಿ ವರಿಷ್ಠರು ನಿರ್ಧಾರ ಕೈಗೊಳ್ಳಲು ಮುಂದಾಗಿರುವ ಹಿನ್ನೆಲೆಯಲ್ಲಿ ಶಾ ಅವರೊಂದಿಗಿನ ವಿಜಯೇಂದ್ರ ಭೇಟಿ ನಿರ್ಣಾಯಕವಾಗಿದೆ. ಏತನ್ಮಧ್ಯೆ ಸೋಮಣ್ಣ ಮನೆ ಪೂಜೆ ನೆಪದಲ್ಲಿ ಬಂಡಾಯ ನಾಯಕರೂ ಕೂಡ ದೆಹಲಿ ಸೇರಿದ್ದಾರೆ. ಸೋಮಣ್ಣ ಮನೆ ಪೂಜೆಗೆ ಹೋಗುತ್ತಿದ್ದೇವೆ ಎಂದು ಎರಡೂ ಬಣದ ನಾಯಕರು ಹೇಳಿದ್ದು, ಅತ್ತ ‘ನಾನು ಯಾರನ್ನೂ ಕರೆದಿಲ್ಲ’ ಎಂದು ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಪಕ್ಷದ ಹೈಕಮಾಂಡ್ ನಾಯಕರು ತಮಗೆ ಅವಕಾಶ ನೀಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿರುವ ಮಾಜಿ ಸಚಿವ ಬಿ. ಶ್ರೀರಾಮುಲು ಅವರು, ಪ್ರಯಾಗ್ರಾಜ್ನಲ್ಲಿ ಪವಿತ್ರ ಸ್ನಾನ ಮಾಡಿ ತವರಿಗೆ ವಾಪಸ್ಸಾಗಿದ್ದಾರೆ.ಸಂಡೂರು ಉಪಚುನಾವಣೆಯಲ್ಲಿ ಪಕ್ಷದ ಸೋಲಿನ ಕುರಿತು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ನೇತೃತ್ವದ ಸಮಿತಿಯ ವರದಿಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಚುನಾವಣೆಗೆ ಉಳಿದಿರುವ ಕೊನೆಯ ಐದು ದಿನಗಳಲ್ಲಿ ಶ್ರೀರಾಮುಲು ಪ್ರಚಾರಕ್ಕೆ ಗೈರುಹಾಜರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವಿಷಯದ ಬಗ್ಗೆ ಬಿಜೆಪಿ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಶ್ರೀರಾಮುಲು ಅವರನ್ನು ಪ್ರಶ್ನಿಸಿದ್ದರು, ಇದರಿಂದ ಅಸಮಾಧಾನಗೊಂಡಿದ್ದ ಅವರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು
