ಬಿಡದಿ ಜಮೀನು ಲಪಟಾಯಿಸಲು ರಾಜ್ಯ ಕಾಂಗ್ರೆಸ್ ಸರಕಾರದ ಸಂಚು: ಕುಮಾರ ಸ್ವಾಮಿ

ಹಾಸನ: 

    ನಾನು ಸಿನಿಮಾ ಹಂಚಿಕೆದಾರರು 1985ರಲ್ಲಿ ಕಷ್ಟಪಟ್ಟು ಬಿಡದಿಯ ಬಳಿ ಖರೀದಿಸಿದ 45 ಎಕರೆ ಜಮೀನನ್ನು ಲಪಟಾಯಿಸಲು ರಾಜ್ಯ ಕಾಂಗ್ರೆಸ್ ಸರಕಾರ ಹೊಂಚು ಹಾಕುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು .ಹಾಸನದಲ್ಲಿ ಅರೆಸೇನಾ ಪಡೆಯ ನಿವೃತ್ತ ಯೋಧರ ಭವನದ ಉದ್ಘಾಟನೆ ಮಾಡಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

   ಆ ಭೂಮಿಯನ್ನು ನಾನು ಕಷ್ಟಪಟ್ಟು ಸಂಪಾದಿಸಿದ್ದೇನೆ. ಅದರಲ್ಲಿ ಒತ್ತುವರಿ ಆಗಿದೆ ಎಂದು ಸಿದ್ದರಾಮಯ್ಯ ಸರಕಾರ ಐದು ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿ ನನ್ನ ಮೇಲೆ ದಾಳಿಗೆ ಬಿಟ್ಟಿದೆ ಎಂದು ಅವರು ನೇರ ಆರೋಪ ಮಾಡಿದರು.

   ನಿನ್ನೆಯ ದಿನ (ಶುಕ್ರವಾರ) ನನಗೆ ನೋಟಿಸ್ ಅನ್ನೇ ನೀಡದೆ ದಾಳಿ ನಡೆಸಲು ಹೊರಟಿದ್ದರು. ಸಂಬಂಧಪಟ್ಟ ಪ್ರಧಾನ ಕಾರ್ಯದರ್ಶಿಗೆ ನಾನು ಹೇಳಿದೆ. “ನೋಡಿ, ಇದು ಸರ್ಕಾರಿ ಜಾಮೀನು ಅಲ್ಲ. ನನ್ನ ಸ್ವಂತ ಜಮೀನು. ನನಗೆ ನೋಟಿಸನ್ನೇ ನೀಡದೇ ಹೇಗೆ ಬರುತ್ತೀರಿ? ನಲವತ್ತು ವರ್ಷಗಳ ಹಿಂದೆ ಭೂಮಿಯನ್ನು ಖರೀದಿ ಮಾಡಿದ್ದೇನೆ. ನೀವು ಬಂದು ಸರ್ವೇ ಮಾಡುವುದಾದರೆ ಆ ಭೂಮಿಯ ಮಾಲೀಕನಾದ ನನಗೆ ಮೊದಲು ನೋಟಿಸ್ ಕೊಡಿ” ಎಂದು ಕೇಳಿದೆ ಎಂದು ಕೇಂದ್ರ ಸಚಿವರು ಹೇಳಿದರು.

   ಇಲ್ಲಿನ ಭೂಮಾಪಕರಿಗೆ ನನ್ನ ಭೂಮಿಯನ್ನು ಸರ್ವೇ ಮಾಡುವುದಕ್ಕೆ ಆಗುವುದಿಲ್ಲ ಎಂದು ಕಾಣುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಭೂಮಾಪಕರನ್ನು ಕರೆ ತನ್ನಿ. ನಾನು ಅದಕ್ಕೂ ತಯಾರಿದ್ದೇನೆ. ಎಷ್ಟು ದಿನ ಈ ರೀತಿ ಆಟ ಆಡುತ್ತೀರಿ? ಐದು ಅಧಿಕಾರಿಗಳ ಎಸ್ ಐಟಿ!! ಒಬ್ಬ ಪ್ರಾದೇಶಿಕ ಆಯುಕ್ತ, ಸಹಾಯಕ ಆಯುಕ್ತರ ಮಟ್ಟದ ನಾಲ್ಕು ಜನ ಅಧಿಕಾರಿಗಳು… ಸರ್ವೇ ಮಾಡಿಕೊಳ್ಳಿ. ಅಲ್ಲಿ ಯಾವುದಾದರೂ ಕಾನೂನು ಬಾಹಿರವಾಗಿ ಒತ್ತುವರಿ ಆಗಿದ್ದರೆ ತೆಗೆದುಕೊಂಡು ಹೋಗಿ ಎಂದು ಸಚಿವರು ಹೇಳಿದರು. 

   ಸರ್ವೇ ಮಾಡಿಕೊಂಡು ಒತ್ತುವರಿ ಆಗಿದ್ದರೆ ಆ ಭೂಮಿ ವಾಪಸ್ ಪಡೆದುಕೊಳ್ಳಲು ನನ್ನದೇನೂ ತಕರಾರು ಇಲ್ಲ. ಆದರೆ ಈ ದೇಶದಲ್ಲಿ ಕಾನೂನು, ಸಂವಿಧಾನ ಎನ್ನುವುದು ಇದೆ. ಅದು ಎಲ್ಲರಿಗೂ ಸಮಾನ ಅಲ್ಲವೇ? ಅಂತಹ ಸಾಂವಿಧಾನಿಕ ವ್ಯವಸ್ಥೆಗಳಿಗೆ ನನ್ನ ಮನವಿ ಇಷ್ಟೇ. ನೀವು ಕೆಲ ಅಭಿಪ್ರಾಯಗಳನ್ನು ವ್ಯಕ್ತ ಮಾಡುವ ಸಂದರ್ಭದಲ್ಲಿ ಸತ್ಯಾತ್ಯತೆಯನ್ನು ಗಮನಿಸಿ. ದಾಖಲೆಗಳನ್ನು ನೋಡಿ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು. 

    ಹಿಂದೆ ಇದೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2011ರ ಬ್ಯಾಚಿನ 370 ಅಭ್ಯರ್ಥಿಗಳು ಕೆಪಿಎಸ್ಸಿ ಪರೀಕ್ಷೆ ಬರೆದಿದ್ದರು. ನ್ಯಾಯಯುತವಾಗಿ ಆಯ್ಕೆಯಾದ ಅವರೆಲ್ಲರನ್ನೂ ಬೀದಿಗೆ ನಿಲ್ಲಿಸಿದರು. ಆಯ್ಕೆ ಪಟ್ಟಿಯನ್ನೇ ರದ್ದು ಮಾಡುತ್ತಾರೆ ಆಗ. ನಾನು ಅವರ ಪರವಾಗಿ ಹೋರಾಟ ನಡೆಸಿದೆ. ಕೇವಲ ಒಬ್ಬ ಮಹಿಳಾ ಅಭ್ಯರ್ಥಿಗಾಗಿ ಆ ಪಟ್ಟಿ ರದ್ದು ಮಾಡುತ್ತಾರೆ. ಆಕೆ ಯಾರು? ರಾಮನಗರದಲ್ಲಿ ಎಸಿ ಆಗಿದ್ದ ಸಿದ್ದಪ್ಪ ಎನ್ನುವ ಅಧಿಕಾರಿಯ ಮಗಳು. ಈಗ ಈಕೆಗೆ ಇವರು ಕೆಲಸವನ್ನು ಕೊಟ್ಟುಬಿಟ್ಟಿದ್ದಾರೆ!! ಆ ಸಿದ್ಧಪ ಎನ್ನುವ ಅಧಿಕಾರಿಯ ಚರಿತ್ರೆ ಗೊತ್ತಿಲ್ಲವೇ ಇವರಿಗೆ? ಅಷ್ಟು ಅಭ್ಯರ್ಥಿಗಳ ಪರ ಹೋರಾಟ ಮಾಡಿದ್ದಕ್ಕೆ ನನ್ನ ಮಗಳಿಗೆ ಅನ್ಯಾಯ ಆಯಿತು ಎಂದು ಆ ವ್ಯಕ್ತಿ ಸುಳ್ಳಿನ ಕಂತೆ ಸೃಷ್ಟಿಸಿದ. ಅದನ್ನು ಇಟ್ಟುಕೊಂಡು ಇವರು ಆಟ ಆಡುತ್ತಿದ್ದಾರೆ. ಬರಲಿ ಅಖಾಡಕ್ಕೆ, ಉತ್ತರ ಕೊಡುತ್ತೇನೆ ಎಂದು ತೀಷ್ಣವಾಗಿ ಹೇಳಿದರು ಕೇಂದ್ರ ಸಚಿವರು. 

   ಕಳೆದ ನಲವತ್ತು ವರ್ಷಗಳಿಂದ ದೇವೇಗೌಡರ ಕುಟುಂಬವನ್ನು ಮುಗಿಸಬೇಕು ಎನ್ನುವ ಹುನ್ನಾರ ನಡೆಯುತ್ತಲೇ ಇದೆ. ಈ ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ. ಜನರು ನನ್ನ ಕೈಗೆ ಐದು ವರ್ಷಗಳ ಸರಕಾರ ಕೊಟ್ಟಿದ್ದಿದ್ದರೆ ಇದಕ್ಕೆಲ್ಲ ಚರಮಗೀತೆ ಹಾಡುತ್ತಿದ್ದೆ. ರಾಜ್ಯದ ಸಾಲವನ್ನು ₹7 ಲಕ್ಷ ಕೋಟಿಗೆ ತೆಗೆದುಕೊಂಡು ಹೋಗಿದ್ದಾರೆ. ಒಮ್ಮೆ ₹2,500 ಕೋಟಿ, ಇನ್ನೊಮ್ಮೆ ₹25,000 ಕೋಟಿ ಸಾಲ ಮನ್ನಾ ಮಾಡಿದೆ. 2006ರಲ್ಲಿ ಬಜೆಟ್ ಗಾತ್ರ ₹34,000 ಕೋಟಿ. 180 ಪ್ರಥಮ ದರ್ಜೆ ಕಾಲೇಜು, 500 ಜ್ಯೂನಿಯರ್ ಕಾಲೇಜು, 1400 ಹೈಸ್ಕೂಲ್ ಮಂಜೂರು ಮಾಡಿದೆ. 56,000 ಶಿಕ್ಷಕರನ್ನು ನೇಮಕ ಮಾಡಿದೆ. ಈ ಸರಕಾರ ಏನು ಕೊಟ್ಟಿದೆ? ಎಷ್ಟು ಜನ ಯುವಜನರಿಗೆ ಉದ್ಯೋಗ ಕೊಟ್ಟಿದೆ? ಇಷ್ಟೊಂದು ಸಾಲ ಮಾಡುತ್ತಿದ್ದಾರೆ. ಮುಂದಿನ ಬಜೆಟ್ ನಲ್ಲಿ ಇನ್ನೆಷ್ಟು ಲಕ್ಷ ಕೋಟಿ ಸಾಲ ಮಾಡುತ್ತಾರೋ ಗೊತ್ತಿಲ್ಲ. ₹1,80,000 ಕೋಟಿ ಆದಾಯ ನಿರೀಕ್ಷೆ ಮಾಡಿದ್ದರು, ಈ ಸಲವೂ ಖೋತಾ ಬಜೆಟ್ ಗ್ಯಾರಂಟಿ. ಇದನ್ನು ಸರಿಪಡಿಸಿಕೊಳ್ಳಬೇಕು ಇವರು ಎಂದು ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.

Recent Articles

spot_img

Related Stories

Share via
Copy link