ಭುವನೇಶ್ವರ:
ಒಡಿಶಾದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ)ಯಲ್ಲಿ ನೇಪಾಳದ ವಿದ್ಯಾರ್ಥಿನಿಯೊಬ್ಬಳು ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿದಕೊಂಡ ನಂತರ ಕೆಐಐಟಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಹತ್ತಾರು ಮಂದಿ ನೇಪಾಳಿ ವಿದ್ಯಾರ್ಥಿಗಳು ಗುಂಪು ಸೇರಿ ದಿಢೀರ್ ಪ್ರತಿಭಟನೆ ನಡೆಸಿದ್ದು, ಕ್ಯಾಂಪಸ್ ನಿಂದ ತಮ್ಮನ್ನು ಬಲವಂತವಾಗಿ ಹೊರ ಕಳುಹಿಸಲಾಗುತ್ತಿದೆ ಎಂದು ದೂರಿದ್ದರು. ಸದ್ಯ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕಿಯೊಬ್ಬರ ನಡುವೆ ನಡೆದ ವಾಗ್ವಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿವೆ. ವಿಡಿಯೋ ವೈರಲ್ ಆದ ಕೆಲವೇ ಹೊತ್ತಿನಲ್ಲಿ ಕೆಐಐಟಿ ಸಿಬ್ಬಂದಿಗಳು ವಿದ್ಯಾರ್ಥಿಗಳಲ್ಲಿ ಕ್ಷಮೆ ಕೇಳಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಮಂಜುಷಾ ಪಾಂಡೆ ಎಂಬ ಪ್ರಾಧ್ಯಾಪಕಿ, ನಾವು 40,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಆಹಾರ ಮತ್ತು ಬೋಧನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಅದಕ್ಕೆ ದನಿಗೂಡಿಸಿದ ಮತ್ತೊಬ್ಬ ಪ್ರಾಧ್ಯಾಪಕಿ ಜಯಂತಿ ನಾಥ್, ಅದು ನಿಮ್ಮ ದೇಶದ ಬಜೆಟ್‌ಗೆ ಸಮ ಎಂದು ವಿದ್ಯಾರ್ಥಿಗಳ ಮೇಲೆ ಕೂಗಾಡಿದ್ದಾರೆ. ಈ ಹೇಳಿಕೆಗೆ ಎಲ್ಲಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಕೆಐಐಟಿ ಪ್ರಾಧ್ಯಾಪಕಿ ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳಿದ್ದಾರೆ.
ವಿಡಿಯೋ ಮೂಲಕ ಕ್ಷಮೆ ಕೇಳಿರುವ ಮಂಜುಷಾ ಪಾಂಡೆ ನಾನು ಹೇಳಿರುವ ಹೇಳಿಕೆ ನನ್ನ ಸ್ವಂತದ್ದು, ಈ ಹೇಳಿಕೆಗೂ ಕೆಐಐಟಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ನನ್ನ ಯಾವುದೇ ಹೇಳಿಕೆಗಳು ನನ್ನ ಯಾವುದೇ ನೇಪಾಳಿ ವಿದ್ಯಾರ್ಥಿಗಳಿಗೆ ಅಥವಾ ನೇಪಾಳದ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಅದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ. ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಮತ್ತೊಬ್ಬ ಸಿಬ್ಬಂದಿ ಜಯಂತಿ ನಾಥ್ ಕೂಡ ಕ್ಷಮೆಯಾಚಿಸಿದ್ದಾರೆ. ನನ್ನ ಹೇಳಿಕೆ ಯಾರಿಗೂ ನೋವುಂಟು ಮಾಡುವುದು ಅಥವಾ ಕೀಳಾಗಿ ಕಾಣುವಂತೆ ಮಾಡುವುದು ಆಗಿರಲಿಲ್ಲ.
ಈ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ. ಘಟನೆಯ ಸಂದರ್ಭವನ್ನು ವಿವರಿಸಿದ ಅವರು ಪ್ರತಿಭಟನೆಯ ಸಮಯದಲ್ಲಿ ನನ್ನ ದೇಶ ಮತ್ತು ನನ್ನ ಸಂಸ್ಥೆಯನ್ನು ಭ್ರಷ್ಟ ಮತ್ತು ಬಡ ಎಂದು ಅವರು ಉಲ್ಲೇಖಿಸಿದ್ದರು. ಹೀಗಾಗಿ ನಾನು ಆ ಮಾತನ್ನು ಹೇಳಿದ್ದೇನೆ ಎಂದು ಅವರು ಹೇಳಿದ್ದಾರೆ.
ಕೆಐಐಟಿ ಸಾರ್ವಜನಿಕ ಕ್ಷಮೆಯಾಚನೆಯನ್ನೂ ಹೊರಡಿಸಿದ್ದು, “ಅತ್ಯಂತ ಬೇಜವಾಬ್ದಾರಿಯುತ” ಹೇಳಿಕೆಗಳನ್ನು ನೀಡಿದ್ದಕ್ಕಾಗಿ ತನ್ನ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿದೆ. ಆದಾಗ್ಯೂ, ಸಂಸ್ಥೆಯು ಅಧಿಕಾರಿಗಳ ಹೆಸರನ್ನು ಹೇಳಲಿಲ್ಲ.
