ಬೆಂಗಳೂರು:
ಎಲ್ಲಾ ವಲಯಗಳಲ್ಲೂ ದರ ಏರಿಕೆ ಮಾಡಿರುವ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅನುಭವಿ ಮುಖ್ಯಮಂತ್ರಿ, ಅವರು ಮುಂದಿನ ತಿಂಗಳು 16ನೇ ಬಜೆಟ್ ಮಂಡಿಸಲಿದ್ದಾರೆ. ಆದರೆ ರಾಜ್ಯದ ಹಣಕಾಸಿನ ಪರಿಸ್ಥಿತಿ ಹೇಗಿದೆ ಎಂದು ಜನರಿಗೆ ತಿಳಿಸಬೇಕಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು. ಸತತವಾಗಿ ಬೆಲೆ ಏರಿಕೆ ಮೂಲಕ ಸರ್ಕಾರ ಬಡವರ ಮೇಲೆ ಬರೆ ಎಳೆಯುತ್ತಿದೆ ಆಸ್ತಿ ನೋಂದಣಿ ಶುಲ್ಕ 600%, ಪ್ರಾಪರ್ಟಿ ಗೈಡೆನ್ಸ್ ವ್ಯಾಲ್ಯೂ 30%, ವಾಹನ ನೋಂದಣಿ ಶುಲ್ಕ 10%, ಆಸ್ಪತ್ರೆಗಳ ಸೇವಾ ದರ 5%, ವಿದ್ಯುತ್ ದರ 14.5%, ಹಾಲಿನ ದರ 15%, ಬಸ್ ದರ 15% ಏರಿಕೆ ಸೇರಿದಂತೆ ಎಲ್ಲಾ ವಲಯಗಳಲ್ಲೂ ದರ ಏರಿಕೆ ಮಾಡಿರುವ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಲೋಕೋಪಯೋಗಿ, ನೀರಾವರಿ, ಸಾರಿಗೆ ಇಲಾಖೆ ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ತಮ್ಮ ವಿದ್ಯುತ್ ಬಿಲ್ ಪಾವತಿಸಲೂ ಸಾಧ್ಯವಾಗುತ್ತಿಲ್ಲ. ರಾಜ್ಯದ ಈ ಸ್ಥಿತಿಗೆ ಯಾರು ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ತಿಳಿಸಬೇಕು ಎಂದರು.
